ಚಂಡೀಗಢ: ಅಮೃತಸರದ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಂಜಾಬ್‌ನ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲಾರ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತರನ್ ತಾರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಲಾಲ್‌ಜಿತ್ ಅವರು ಭಗವಂತ್ ಮಾನ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
'ತಮ್ಮ ಮೇಲೆ ಆಧಾರರಹಿತ ಆರೋಪ ಮಾಡಲಾಗಿದೆ' ಎಂದು ಭುಲ್ಲಾರ್ ತಿರುಗೇಟು ನೀಡಿದ್ದಾರೆ.
ಆರೋಪ ಬಂದ ಬೆನ್ನಲ್ಲೇ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭುಲ್ಲಾರ್ ಅವರಿಗೆ ಸೂಚನೆ ನೀಡಿದ್ದರು. ಪ್ರಕರಣದ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.
'ಪ್ರಕರಣದ ಹಿಂದಿನ ಕಾರಣಗಳು ತನಿಖೆಯಿಂದ ಪತ್ತೆಯಾಗಲಿವೆ. ತನಿಖೆ ಆರಂಭಿಸುವ ಮೊದಲು ಸಚಿವರಿಂದ ರಾಜೀನಾಮೆ ಪಡೆಯುವ ಮೂಲಕ ಯಾರೂ ಒತ್ತಡಕ್ಕೆ ಒಳಗಾಗದಂತೆ ಕ್ರಮ ವಹಿಸಲಾಗಿದೆ' ಎಂದು ಮಾನ್ ತಿಳಿಸಿದ್ದಾರೆ.
'ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಭುಲ್ಲಾರ್ ಅವರ ಖಾತೆಯನ್ನು ಬೇರೆಯವರಿಗೆ ವಹಿಸಲಾಗುವುದು' ಎಂದು ಹೇಳಿದ್ದಾರೆ.
ಲಾಲ್‌ಜಿತ್ ಸಿಂಗ್ ಭುಲ್ಲಾರ್ ಅವರ ಕಿರುಕುಳದಿಂದ ಬೇಸತ್ತು ತಾನು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಾದ ಗಗನ್‌ದೀಪ್ ಸಿಂಗ್ ರಾಂಧವ ಅವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.
ಇದರ ಬೆನ್ನಲ್ಲೇ, ಬಿಜೆಪಿ, ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿದಳದ ಮುಖಂಡರು ಸಚಿವರು ರಾಜೀನಾಮೆಗೆ ಆಗ್ರಹಿಸಿದ್ದರು.

