ವಾಷಿಂಗ್ಟನ್/ನ್ಯೂಯಾರ್ಕ್: ಮುಂದಿನ ಕೆಲವೇ ಕೆಲವು ತಾಸುಗಳಲ್ಲಿ ಇರಾನ್‌ನ ಆಕಾಶದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವುದಾಗಿ ಅಮೆರಿಕ ಹೇಳಿದೆ.
ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೊಲಿನ್ ಲೆವಿಟ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
'ಇರಾನ್ ವಾಯುಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಅಮೆರಿಕ ಸಜ್ಜಾಗಿದೆ' ಎಂದು ಹೇಳಿದ್ದಾರೆ.
'ರಾಜತಾಂತ್ರಿಕತೆಯ ಮೂಲಕ ಶಾಂತಿಯನ್ನು ಸ್ಥಾಪಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದ್ದರು. ಆದರೆ ಇರಾನಿಯನ್ನರು ಅಮೆರಿಕದ ವಿನಾಶವನ್ನು ಬಯಸಿದ್ದರಿಂದ ಮಾತುಕತೆ ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ.
ಅಮೆರಿಕ ಜೊತೆ ಸ್ಪೇನ್ ಸಹಕಾರ...
'ಅಮೆರಿಕದ ಮಿಲಿಟರಿಯೊಂದಿಗೆ ಸಹಕರಿಸಲು ಸ್ಪೇನ್ ಒಪ್ಪಿಕೊಂಡಿದೆ. ಯುರೋಪಿನ ಎಲ್ಲ ಮಿತ್ರರಾಷ್ಟ್ರಗಳು ಸಹಕರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದು ಲೆವಿಟ್ ತಿಳಿಸಿದ್ದಾರೆ.
ಈ ಮೊದಲು ಇರಾನ್ ಮೇಲೆ ಅಮೆರಿಕದ ದಾಳಿಯನ್ನು ಸ್ಪೇನ್ ಪ್ರಧಾನಿ ಪೆದ್ರೊ ಸ್ಯಾಂಟೆಸ್ ಖಂಡಿಸಿದ್ದರು.
ಇರಾನ್ ಮೇಲೆ ದಾಳಿ ಮುಂದುವರಿಕೆ...
ಇನ್ನೊಂದೆಡೆ ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
'ಇರಾನ್ ವಿರುದ್ಧದ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದೇವೆ. ಕೆಟ್ಟವರನ್ನು ನಾಶಪಡಿಸಲಿದ್ದೇವೆ' ಎಂದು ಟ್ರಂಪ್ ಹೇಳಿದ್ದಾರೆ.

