ಟೆಲ್ ಅವೀವ್: ಇರಾನ್ ವಿರುದ್ಧದ ಇಸ್ರೇಲ್ ಸೇನಾ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.
ರಾಷ್ಟ್ರೀಯ ಆರೋಗ್ಯ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ನೆತನ್ಯಾಹು, 'ಇರಾನ್‌ನ ಜನರನ್ನು ದೌರ್ಜನ್ಯದ ನೊಗದಿಂದ ಮುಕ್ತಗೊಳಿಸುವುದು ನಮ್ಮ ಆಕಾಂಕ್ಷೆಯಾಗಿದೆ.
ಇಲ್ಲಿಯವರೆಗೆ ಕೈಗೊಂಡ ಕ್ರಮಗಳಿಂದ ನಾವು ನಮ್ಮ ಶತ್ರುಗಳ ಮೂಳೆಯನ್ನು ಮುರಿದಿದ್ದೇವೆ. ನಮ್ಮ ಕೆಲಸ ಇನ್ನೂ ಮುಗಿದಿಲ್ಲ' ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಶೀಘ್ರದಲ್ಲೇ ಸಂಘರ್ಷ ಕೊನೆಗೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ತಳ್ಳಿಹಾಕಿದ್ದಾರೆ.
'ಇರಾನ್ ಮೇಲೆ ದಾಳಿ ನಡೆಸುವುದಿಲ್ಲ ಎಂಬ ಭರವಸೆ ದೊರೆತಾಗ ಮತ್ತು ತಮ್ಮ ಕೃತ್ಯಗಳನ್ನು ಅವರು(ಅಮೆರಿಕ-ಇಸ್ರೇಲ್) ಒಪ್ಪಿಕೊಂಡಾಗ ಮಾತ್ರ ಕದನ ವಿರಾಮವನ್ನು ಪರಿಗಣಿಸಬಹುದು. ಅವರು ನಮ್ಮ ಬಳಿ ಬಂದು ಕದನ ವಿರಾಮವನ್ನು ಪ್ರಸ್ತಾಪಿಸುವುದು, ಅದನ್ನು ನಾವು ಒಪ್ಪುವುದು ಸಾಧ್ಯವಿಲ್ಲ' ಎಂದಿದ್ದಾರೆ.
'ಈ ಸಂಘರ್ಷದಲ್ಲಿ ನಮ್ಮ ಕೈ ಮೇಲಿದೆ. ಅವರ(ಅಮೆರಿಕ-ಇಸ್ರೇಲ್) ಯೋಜನೆಗಳು ವಿಫಲವಾಗಿವೆ. ಜಾಗತಿಕ ಇಂಧನ ಮತ್ತು ಆರ್ಥಿಕತೆಯ ಸ್ಥಿತಿಯನ್ನು ಗಮನಿಸಿದರೆ ಅದು ತಿಳಿಯುತ್ತದೆ. ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ' ಎಂದಿದ್ದಾರೆ.

