ಬದಿಯಡ್ಕ: ವಿದ್ಯಾಗಿರಿ ನವಕಾನದಲ್ಲಿ ಆಮ್ನಿ ವಾಹನ ಹೊಂಡಕ್ಕೆ ಉರುಳಿಬಿದ್ದು, ವಿದ್ಯಾಗಿರಿ ಬಜ ನಿವಾಸಿ ಸತ್ಯನಾರಾಯಣ ಭಟ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸಥಳೀಯರು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗುರುವಾರ ಬೆಳಗ್ಗೆ ಬದಿಯಡ್ಕಕ್ಕೆ ಆರೋಗ್ಯ ತಪಾಸಣೆಗಾಗಿ ಸತ್ಯನಾರಾಯಣ ಅವರು ಆಮ್ನಿ ವಾಹನದಲ್ಲಿ ತೆರಳುವ ಮಧ್ಯೆ ನಿಯಂತ್ರಣಕಳೆದುಕೊಂಡ ವಾಹನ ರಸ್ತೆಬದಿಯ ಮರಕ್ಕೆ ಡಿಕ್ಕಿಯಾಗಿ, ಸುಮಾರು 12ಅಡಿ ಆಳದ ಹೊಂಡಕ್ಕೆ ಬಿದ್ದಿದೆ. ಅಲ್ಪ ಹೊತ್ತಿನ ನಂತರ ಈ ಹಾದಿಯಾಗಿ ನಡೆದುಹೋಗುತ್ತಿದ್ದ ಪ್ರಸಾದ್ ಮುನಿಯೂರು ಎಂಬವರು ಅಪಘಾತಕ್ಕೀಡಾದ ವಾಹನ ಕಂಡು, ನೀಡಿದ ಮಾಹಿತಿಯನ್ವಯ ಸ್ಥಳೀಯ ನಿವಾಸಿಗಳಾದ ಹಾರಿಸ್, ಸುಧಾಕರ, ಗ್ರಾಪಂ ಸದಸ್ಯ ಬಾಲಕೃಷ್ಣ ಶೆಟ್ಟಿ, ಸೂಫಿ ಹಾಜಿ ಮೊದಲಾದವರು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಹಾಗೂ ಅಗ್ನಿಶಾಮಕ ದಳ ಸಹಾಯದಿಂದ ಆಮ್ನಿ ವಾಹನದೊಳಗೆ ಸಿಲುಕಿಕೊಂಡಿದ್ದ ಸತ್ಯನಾರಾಯಣ ಭಟ್ ಅವರನ್ನು ಹೊರತೆಗೆದು, ವಾಹನ ಮೇಲಕ್ಕೆತ್ತಿದ್ದಾರೆ. ಬದಿಯಡ್ಕ ಠಾಣೆ ಪೊಲೀಸರೂ ಸ್ಥಳಕ್ಕಾಗಮಿಸಿ ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ.

