ಬದಿಯಡ್ಕ: ರಾಜ್ಯವನ್ನು ಅಧೋಗತಿಗೆ ತಳ್ಳಿದ ಎಡರಂಗ ಸರ್ಕಾರದ ವಿರುದ್ಧದ ನಮ್ಮ ಸಿಟ್ಟನ್ನು ತೋರಿಸುವ ಚುನಾವಣೆ ಸನಿಹವಾಗಿದೆ. ಯಾವುದೇ ಅಭಿವೃದ್ಧಿಯನ್ನು ಮಾಡದೆ ಕೇರಳವನ್ನು ಸ್ವಂತ ಹಿತಾಸಕ್ತಿಗೋಸ್ಕರ ಲೂಟಿ ಮಾಡಿದ ಎಡಬಲರಂಗಗಳನ್ನು ಹೊರಹಾಕುವುದರ ಜೊತೆಗೆ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಚುನಾವಣೆ ಇದಾಗಬೇಕು. ಕೇವಲ ಒಂದು ಗಂಟೆಯಲ್ಲಿ ಮಂಗಳೂರಿನಿಂದ ಇಂದು ಕಾಸರಗೋಡಿಗೆ ಪ್ರಯಾಣಿಸಬಹುದು. ಇದಕ್ಕೆ ಕಾರಣ ದೇಶದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಾರಣ ಎಂದು ಬೆಂಗಳೂರು ಸಂಸದ, ಯುವಮೋರ್ಚಾ ಕರ್ನಾಟಕ ರಾಜ್ಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ಎನ್‍ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರ ಚುನಾವಣಾ ಪ್ರಚಾರದ ಅಂಗವಾಗಿ ಬದಿಯಡ್ಕದಲ್ಲಿ ನಡೆದ ರೋಡ್ ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಸರಗೋಡು ಮತ್ತು ಮಂಜೇಶ್ವರ ಅಭಿವೃದ್ಧಿಯನ್ನು ಹೊಂದದ ಪ್ರದೇಶವಾಗಿದೆ. ಕೇರಳದ ಅರ್ಧದಷ್ಟು ಜನ ಬೆಂಗಳೂರಿನಲ್ಲಿದ್ದಾರೆ. ದೇಶದಲ್ಲಿ ಅತ್ಯಂತ ಬುದ್ಧಿವಂತರು, ಕಠಿಣ ಪರಿಶ್ರಮ ಪಡುವ ಯುವಕರು ಕೇರಳದಲ್ಲಿ ಕೆಲಸವಿಲ್ಲದೆ ಅನ್ಯ ರಾಜ್ಯಗಳನ್ನು ಅವಲಂಬಿಸುವ ಪರಿಸ್ಥಿತಿಯಿದೆ. ಹಿರಿಯ ನಾಗರಿಕರು ಮಾತ್ರ ಕೇರಳದಲ್ಲಿದ್ದಾರೆ. ಕೇರಳದ ಎಲ್ಲಾ ಹೆದ್ದಾರಿ ರಸ್ತೆಗಳೂ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಭಿವೃದ್ಧಿಯಾಗಿವೆ. ಒಳ್ಳೆಯ ರಸ್ತೆ ಬಂದರೆ ಎಲ್ಲಾ ಜನರಿಗೂ ಉಪಯೋಗವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಕಲ ವಿಭಾಗದಲ್ಲಿಯೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ. ಉತ್ತಮ ಶಾಲೆ, ಕಾಲೇಜು, ಆಸ್ಪತ್ರೆಗಳು ಇಲ್ಲದ ಕೇರಳ ರಾಜ್ಯವನ್ನು ಬಿಟ್ಟು ಅನೇಕ ಜನರು ಇತರ ರಾಜ್ಯಗಳಿಗೆ ತೆರಳುತ್ತಿದಾರೆ. ಮಲಯಾಳ ಭಾಷೆಗೆ ನೀಡುವಷ್ಟೇ ಪ್ರಾಮುಖ್ಯತೆ ಕನ್ನಡ ಭಾಷೆಗೂ ಲಭಿಬೇಕು. ಕಾಸರಗೋಡಿನಲ್ಲಿ ಬಿಜೆಪಿ ಗೆದ್ದುಬಂದಲ್ಲಿ ಎಲ್ಲರಿಗೂ 5 ಲಕ್ಷ ರೂ. ಆರೋಗ್ಯ ವಿಮೆ ಜಾರಿಯಾಗಲಿದೆ ಎಂದರು.
ಎನ್.ಡಿ.ಎ.ಅಭ್ಯರ್ಥಿ ಅಶ್ವಿನಿ ಎಂ.ಎಲ್., ರವೀಶ ತಂತ್ರಿ ಕುಂಟಾರು, ಶ್ರೀಧರ ಬೆಳ್ಳೂರು, ಶಂಕರ ಡಿ., ರಾಮಪ್ಪ ಮಂಜೇಶ್ವರ, ಅಶ್ವಿನಿ ಕೆ.ಎಂ., ಗೋಪಾಲಕೃಷ್ಣ ಮುಂಡೋಲುಮೂಲೆ, ರವೀಂದ್ರ ರೈ ಗೋಸಾಡ, ಎಂ.ಸುಧಾಮ ಗೋಸಾಡ ಸಹಿತ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ರೋಡ್ ಶೋ ಆರಂಭಕ್ಕೂ ಮುನ್ನ ಮಳೆ ಸುರಿದು ಅಡಚಣೆಯಾದರೂ ಕಾರ್ಯಕರ್ತರು ಉತ್ಸಾಹದಿಂದ ಘೋಷಣೆ ಕೂಗುತ್ತಾ ಮುಂದುವರಿದರು. ನಾಯಕರೂ ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.

.jpg)
.jpg)
