ನವದೆಹಲಿ: ಅಸ್ಸಾಂ, ಕೇರಳ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ) ಮತ್ತು ಮತದಾನ ದೃಢೀಕರಣ ರಸೀದಿ ಯಂತ್ರಗಳ(ವಿವಿ-ಪ್ಯಾಟ್) ಮೊದಲ ಹಂತದ ಯಾದೃಚ್ಛಿಕ ಆಯ್ಕೆಯನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ.
ಪಾರದರ್ಶಕತೆ ಮತ್ತು ರಾಜಕೀಯ ಪಕ್ಷಗಳು ಹಾಗೂ ಮತದಾರರ ವಿಶ್ವಾಸವನ್ನು ಹೆಚ್ಚಿಸಲು ಆಯೋಗವು ಮತಗಟ್ಟೆಗಳಿಗೆ ಇವಿಎಂ ಹಂಚಿಕೆಯನ್ನು ಎರಡು ಹಂತದ ಯಾದೃಚ್ಛಿಕ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಸುತ್ತದೆ.
ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದ ಸಂಗ್ರಹಗಾರಕ್ಕೆ ಇವಿಎಂ ಮತ್ತು ವಿವಿ-ಪ್ಯಾಟ್‌ಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಗೋವಾ, ಕರ್ನಾಟಕ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ನಡೆಯಲಿರುವ ಉಪಚುನಾವಣೆಗೂ ಇವಿಎಂಗಳ ಯಾದೃಚ್ಚಿಕ ಆಯ್ಕೆ ಪ್ರಕ್ರಿಯೆ ನಡೆದಿದೆ.

