ನವದೆಹಲಿ: 'ಶಬ್ಧಾತೀತ ಕ್ಷಿಪಣಿಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ ಇರುವ, ಭಾರತದ ಸ್ವದೇಶಿ ನಿರ್ಮಿತ ಸುಧಾರಿತ ಯುದ್ಧನೌಕೆ 'ತಾರಾಗಿರಿ' ಏಪ್ರಿಲ್ 3ರಂದು ನೌಕಾಪಡೆಗೆ ನಿಯೋಜನೆಗೊಳ್ಳಲಿದೆ' ಎಂದು ಶನಿವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ವಿಶಾಖಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನೌಕೆಯ ಸೇರ್ಪಡೆಗೆ ನಿಶಾನೆ ತೋರಲಿದ್ದಾರೆ. ದೇಶವು ಸಂಪೂರ್ಣವಾಗಿ ಸ್ವಾವಲಂಬಿ ನೌಕಾಶಕ್ತಿಯಾಗುವ ಪಯಣದಲ್ಲಿ ಇದೊಂದು ಶಕ್ತಿಶಾಲಿ ಹೆಜ್ಜೆ' ಎಂದು ನೌಕಾಪಡೆಯ ವಕ್ತಾರರು ಹೇಳಿದ್ದಾರೆ.
'ತಾರಾಗಿರಿ'ಯು 'ಮೇಕ್ ಇನ್ ಇಂಡಿಯಾ' ಸ್ಫೂರ್ತಿಯೊಂದಿಗೆ ನಿರ್ಮಾಣವಾಗಿರುವ 6,670 ಟನ್ ತೂಕದ ಚತುರ ಕಾರ್ಯಕ್ಷಮತೆಯ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿರುವ ದೈತ್ಯ ರೂಪದ ನೌಕಾಶಕ್ತಿ' ಎಂದು ಅವರು ಬಣ್ಣಿಸಿದ್ದಾರೆ.
ಮುಂಬೈನ 'ಮಝಗಾಂವ್ ಡಾಕ್ ಶಿಪ್ಪಿಂಗ್ ಲಿಮಿಟೆಡ್' ನಿರ್ಮಿಸಿರುವ ಮೂರನೇ ಬೃಹತ್ ನೌಕೆ ಇದು. ಕಳೆದ ವರ್ಷ ನವೆಂಬರ್ 28ರಂದೆ ನೌಕೆಯನ್ನು ನೌಕಾಪಡೆಯ ವಶಕ್ಕೆ ನೀಡಲಾಗಿತ್ತು.
'ಈ ನೌಕೆ ರಹಸ್ಯ ಕಾರ್ಯಾಚರಣೆ, ಶಸ್ತ್ರಾಸ್ತ್ರ ಉಡಾವಣೆ, ಸ್ವಯಂಚಾಲಿತ ವ್ಯವಸ್ಥೆ ಮತ್ತು ದೀರ್ಘಾವಧಿ ಬಳಕೆಗೆ ಬರುವ ಸಾಮರ್ಥ್ಯ ಹೊಂದಿದೆ. ಸಮರನೌಕೆ ನಿರ್ಮಾಣದಲ್ಲಿ 'ಆತ್ಮನಿರ್ಭರ ಭಾರತ'ದ ಹೆಗ್ಗುರುತಾಗಿದೆ' ಎಂದರು.
'ಭೂಮಿಯಿಂದ ಭೂಮಿಗೆ, ಭೂ ಮೇಲ್ಮೈನಿಂದ ಆಗಸದ ಗುರಿಯತ್ತ ಚಿಮ್ಮುವ ಕ್ಷಿಪಣಿ, ಜಲಾಂತರ್ಗಾಮಿ ಪ್ರತಿರೋಧಕ ಸೇರಿದಂತೆ ವಿಶ್ವ ದರ್ಜೆಯ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು 'ತಾರಾಗಿರಿ' ಹೊಂದಿದೆ. ಇದರ ಯುದ್ಧ ನಿರ್ವಹಣಾ ವ್ಯವಸ್ಥೆಯಿಂದ ಸಿಬ್ಬಂದಿ ಕ್ಷಣಾರ್ಧದಲ್ಲಿ ದಾಳಿಗಳಿಗೆ ಪ್ರತಿರೋಧ ಒಡ್ಡಲು ಸಾಧ್ಯವಿದೆ' ಎಂದು ಅವರು ತಿಳಿಸಿದರು.

