ಕೊಚ್ಚಿ: ದೋಷರಹಿತ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು, ಅನರ್ಹರು ಪಟ್ಟಿಯೊಳಗೆ ಸೇರಬಾರದು. ಈ ಸ್ಪಷ್ಟ ಉದ್ದೇಶದಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು.
ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಜಾಪ್ರಭುತ್ವ ಎನ್ನುವುದು ಈ ರಾಜ್ಯಕ್ಕೆ ಹೊಸದೇನಲ್ಲ. ಕೇರಳವು ದೇಶದ ಮತ್ತು ಪ್ರಪಂಚದ ಅನೇಕ ಭಾಗಗಳಿಗೆ ಪ್ರಜಾಪ್ರಭುತ್ವದ ಅನುಷ್ಠಾನದ ಬಗ್ಗೆ ಕಲಿಸಿದೆ' ಎಂದು ಹೇಳಿದರು.
ಇದೇ ವೇಳೆ ರಾಜ್ಯದೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡ ಕುಮಾರ್, 'ಕೇರಳದಲ್ಲಿ 18 ವರ್ಷ ಕೆಲಸ ಮಾಡಿದ್ದೇನೆ. 22 ವರ್ಷಗಳ ಹಿಂದೆ ರಾಜ್ಯದ ಎರ್ನಾಕುಲಂ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ' ಎಂದು ಹೇಳಿದರು.
ಕೇರಳದಲ್ಲಿ ಸಾವಿರ ವರ್ಷಗಳಿಗೂ ಹಿಂದೆಯೇ 'ನಟ್ಟುಕುಟ್ಟಂ' (ಗ್ರಾಮ ಸಭೆಗಳು) ನಡೆಯುತ್ತಿದ್ದವು. ಇದು ಗ್ರಾಮಸ್ಥರು ಸಾಮೂಹಿಕವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ಅಡಿಪಾಯ ಹಾಕಿತು' ಎಂದು ಅವರು ಉಲ್ಲೇಖಿಸಿದರು.
'1960 ರಲ್ಲಿ ಕೇರಳ ಮೊದಲ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೆ ತಂದಿತು. ನಂತರ ಇದನ್ನು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಭಾರತದ ಚುನಾವಣಾ ಆಯೋಗವು ಅಂಗೀಕರಿಸಿತು. ಇಂದು ನಾವು ಇದನ್ನು ಮಾದರಿ ನೀತಿ ಸಂಹಿತೆ ಎಂದು ಕರೆಯುತ್ತೇವೆ' ಎಂದು ಅವರು ವಿವರಿಸಿದರು.
ಚುನಾವಣೆಯ ನಿರ್ವಹಣೆಯಲ್ಲಿ ಕೇರಳವು ಮುಂಚೂಣಿಯಲ್ಲಿರುವ ರಾಜ್ಯವಾಗಿದೆ ಎಂದು ಹೇಳಿದ ಕುಮಾರ್, 1982 ರಲ್ಲಿ ಪರವೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯನ್ನು ಪರಿಚಯಿಸಲಾಯಿತು' ಎಂದು ನೆನಪಿಸಿದರು.
'ಇಂಥ ಬಲವಾದ ಅಡಿಪಾಯದ ಹಿನ್ನೆಲೆಯಲ್ಲಿ, ಮುಂಬರುವ ಚುನಾವಣೆಗಳು ಕೇವಲ ರಾಜ್ಯಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಮಾದರಿಯಾಗಿರುತ್ತವೆ ಎಂದು ಕೇರಳದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಯ ಭಾಗವಾಗಿರುವ ಆಡಳಿತದ ಭಾಗಗಳು ಒಕ್ಕೊರಲಿನಿಂದ ಹೇಳಿವೆ' ಎಂದು ಅವರು ತಿಖಳಿಸಿದರು.
ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ 124 ಸಾಮಾನ್ಯ, 14 ಕ್ಷೇತ್ರಗಳು ಪರಿಶಿಷ್ಟ ಜಾತಿಗಳಿಗೆ ಮೀಸಲು ಕ್ಷೇತ್ರ ಮತ್ತು ಎರಡು ಕ್ಷೇತ್ರಗಳು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ.

