2017ರಲ್ಲಿ ರಾಷ್ಟ್ರೀಯ ರಕ್ತ ವರ್ಗವಣಾ ಮಂಡಳಿಯು (ಎನ್‌ಬಿಟಿಸಿ) ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯರು ಹಾಗೂ ಸಲಿಂಗ ಲೈಂಗಿಕ ಒಲವುಳ್ಳ ಪುರುಷರು ರಕ್ತದಾನಿಗಳಾಗುವುದನ್ನು ನಿರ್ಬಂಧಿಸಿ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿತ್ತು. ಈ ಮಾರ್ಗಸೂಚಿಗಳು ತಾರತಮ್ಯ ಎಸಗುತ್ತಿವೆ ಎಂದು ಆರೋಪಿಸಿ ಸುಪ‍್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಕಳೆದ ಮೇ ನಲ್ಲಿ ನಡೆದ ವಿಚಾರಣೆ ವೇಳೆ ಮಾರ್ಗಸೂಚಿಗಳ ಸರಳೀಕರಣ ಕುರಿತು ತಜ್ಞರ ಅಭಿಪ್ರಾಯ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತ್ತು.
ಅದರಂತೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, 'ತಜ್ಞರು ನಿಯಮಗಳ ಸಡಿಲೀಕರಣದ ವಿರುದ್ಧ ಅಭಿಪ್ರಾಯ ನೀಡಿದ್ದಾರೆ' ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

