ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ನಂದಿಸಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ, ಸುಮಾರು 1.62 ಲಕ್ಷ ಲೀಟರ್ ನೀರನ್ನು ಸಿಂಪಡಿಸಿವೆ.
'ಕಾರ್ಯಾಚರಣೆಯು ಮಾರ್ಚ್ 8ರಂದು ಆರಂಭವಾಗಿ, ಗುರುವಾರ ಅಂತ್ಯಗೊಂಡಿದೆ.
ಕಾರ್ಯಾಚರಣೆ ವೇಳೆ, ಹೆಲಿಕಾಪ್ಟರ್‌ಗಳು ಸಿಯಾಂಗ್ ನದಿಯಿಂದ ನೀರು ತಂದು ಕಾಡ್ಗಿಚ್ಚಿನಿಂದ ಆವೃತ್ತವಾದ ಪ್ರದೇಶಗಳು ಮತ್ತು ಹತ್ತಿರದ ಜನವಸತಿ ಪ್ರದೇಶಗಳ ಮೇಲೆ ಹಾಕಿದವು' ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಡ್ಯಾನಿ ಸುಲು ಅವರು ಗುರುವಾರ ತಿಳಿಸಿದ್ದಾರೆ.
ಸಿಯಾಂಗ್ ಜಿಲ್ಲೆಯ ಸುಮಾರು 140 ಹೆಕ್ಟೇರ್ ಮೀಸಲು ಅರಣ್ಯ ಮತ್ತು ಸುಮಾರು 200 ಹೆಕ್ಟೇರ್ ಸಾಮಾಜಿಕ ಅರಣ್ಯ, ಕೃಷಿ ಮತ್ತು ತೋಟಗಾರಿಕಾ ಜಮೀನುಗಳಲ್ಲಿ ಕಾಡ್ಗಿಚ್ಚು ಹಬ್ಬಿತ್ತು. ಆದರೆ, ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

