ಪುಣೆ: ಬಾರಾಮತಿ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಸ್‌ಆರ್ ವೆಂಚರ್ಸ್‌ನ ಮಾಲೀಕ ವಿ.ಕೆ.ಸಿಂಗ್ ಅವರನ್ನು ಮಹಾರಾಷ್ಟ್ರ ಅಪರಾಧ ತನಿಖಾದಳವು (ಸಿಐಡಿ) ಗುರುವಾರ ವಿಚಾರಣೆ ನಡೆಸಿದೆ.
ವಿಎಸ್‌ಆರ್ ವೆಂಚರ್ಸ್ ನಿರ್ವಹಿಸುತ್ತಿದ್ದ ವಿಮಾನವೊಂದು ಜನವರಿ 28ರಂದು ಬಾರಾಮತಿಯಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದರು.
ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ವಿಎಸ್‌ಆರ್ ವೆಂಚರ್ಸ್‌ಗೂ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೀಗ ವಿ.ಕೆ.ಸಿಂಗ್ ಅವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ನೀಡಿರುವ ವರದಿಯಲ್ಲೇ ಲೋಪ ದೋಷವಿದ್ದು, ವಿಎಸ್‌ಆರ್ ವೆಂಚರ್ಸ್ ಅನ್ನು ರಕ್ಷಿಸಲು ಯಾರೋ ಪ್ರಯತ್ನಿಸುತ್ತಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಇತ್ತೀಚೆಗೆ ಆರೋಪಿಸಿದ್ದರು.
ಅಲ್ಲದೇ, ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ಕೂಡ ಈ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ವಿಎಸ್‌ಆರ್ ವೆಂಚರ್ಸ್‌ನ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಕೆಲ ದಿನಗಳ ಹಿಂದಷ್ಟೇ ತಾಕೀತು ಮಾಡಿದ್ದರು. ನಡುವೆಯೇ ಈ ಬೆಳವಣಿಗೆ ನಡೆದಿದೆ.

