ಟೆಹ್ರಾನ್: ಹಾರ್ಮುಝ್ ಜಲಸಂಧಿ ಸಮೀಪದಲ್ಲಿ ಸಾಗುತ್ತಿದ್ದ ಹಡಗಿಗೆ ಕ್ಷಿಪಣಿ ದಾಳಿ ಮಾಡಿದ ಪರಿಣಾಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ ಎಂದು ಯುನೈಟೆಡ್ ಕಿಂಗ್ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ತಿಳಿಸಿದೆ ಎಂದು Aljazeera ವರದಿ ಮಾಡಿದೆ.
'ಹಾರ್ಮುಝ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗಿಗೆ ಅಜ್ಞಾತ ಕ್ಷಿಪಣಿ ದಾಳಿ ಮಾಡಿರುವ ಕುರಿತು ವರದಿ ಬಂದಿದೆ. ಇದರ ಪರಿಣಾಮವಾಗಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ,' ಎಂದು UKMTO ಪ್ರಕಟನೆಯಲ್ಲಿ ತಿಳಿಸಿದೆ.
ಇರಾನ್ ಪ್ರಮುಖ ಸಮುದ್ರ ಮಾರ್ಗವಾಗಿರುವ ಈ ಜಲಸಂಧಿಯನ್ನು ಮುಚ್ಚುವ ಕ್ರಮವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಹಡಗುಗಳ ಮೇಲೆ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳು ಗಗನಕ್ಕೇರಿವೆ.
ಇದರ ನಡುವೆ, ಇರಾನ್ ನ ಸರ್ವೋಚ್ಚ ನಾಯಕನಾಗಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಮೊಜ್ತಾಬಾ ಖಾಮಿನೈ ಅವರು, 'ಹಾರ್ಮುಝ್ ಜಲಸಂಧಿಯನ್ನು ಮುಚ್ಚುವ ತಂತ್ರವನ್ನು ಮುಂದುವರಿಸಬೇಕು,' ಎಂದು ಹೇಳಿದ್ದಾರೆ.

