ನವದೆಹಲಿ: ಇಂಧನ ಅಭಾವಕ್ಕೆ ಕಾರಣವಾಗಿರುವ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ವ್ಯಾಪಕ ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಬುಧವಾರ ಒತ್ತಾಯಿಸಿವೆ.
'ದೇಶದಲ್ಲಿ ಇಂಧನ ಬಿಕ್ಕಟ್ಟು ಗಂಭೀರ ಸ್ವರೂಪ ತಾಳುತ್ತಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
'ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮೋದಿ ಸರ್ಕಾರಕ್ಕೆ ತಿಳಿದಿದೆ. ಆದರೂ ದೇಶದಲ್ಲಿ ಇಂಧನ ಪೂರೈಕೆಯನ್ನು ಖಚಿತಪಡಿಸಲು ಏನನ್ನೂ ಮಾಡಿಲ್ಲ. ಇದು ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಾಗಿದೆ' ಎಂದಿದ್ದಾರೆ.
'ದೇಶಕ್ಕೆ ಸತ್ಯಾಂಶ ಗೊತ್ತಾಬೇಕು. ಈ ಬಿಕ್ಕಟ್ಟಿನ ಸಮಯದಲ್ಲಿ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
'ಇಂಧನದ ಕೊರತೆಯು ಕೃಷಿ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಪರಿಣಾಮ ಬೀರುವುದರಿಂದ ರೈತರು ಮೊದಲು ತೊಂದರೆ ಅನುಭವಿಸುತ್ತಾರೆ' ಎಂದು ಅವರು ಹೇಳಿದ್ದಾರೆ.
ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆ ಬಗ್ಗೆಯೂ ಖರ್ಗೆ ಕಳವಳ ವ್ಯಕ್ತಪಡಿಸಿದ್ದು, 'ಗ್ಯಾಸ್ ಏಜೆನ್ಸಿಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬರುತ್ತಿವೆ' ಎಂದಿದ್ದಾರೆ.
'60 ಸಾವಿರ ಟನ್ ಬಾಸ್ಮತಿ ರಫ್ತು ಸ್ಥಗಿತಗೊಂಡಿದೆ. ಗೋಧಿ ರಫ್ತಿಗೂ ಅಡ್ಡಿಯಾಗಿದೆ. ಔಷಧ ಬೆಲೆಗಳು ಏರಿಕೆಯಾಗುವ ಭೀತಿಯಿದೆ. ಎಲ್ಲ ವಲಯಗಳಲ್ಲೂ ಬೆಲೆ ಏರಿಕೆ ಬಿಸಿ ತಟ್ಟಿದೆ' ಎಂದು ಹೇಳಿದ್ದಾರೆ.

