ಶಿಲ್ಲಾಂಗ್ (PTI): ಮೇಘಾಲಯದ ಗಾರೊ ಹಿಲ್ಸ್‌ನಲ್ಲಿ ಎರಡು ದಿನ ಕರ್ಫ್ಯೂ ವಿಸ್ತರಿಸಿ ಸ್ಥಳೀಯ ಆಡಳಿತವು ಆದೇಶ ಹೊರಡಿಸಿದೆ.
ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಸ್‌ಎಡಿಸಿ) ಚುನಾವಣಾ ನಾಮಪತ್ರ ಸಲ್ಲಿಕೆ ವಿಚಾರವಾಗಿ ಉಂಟಾದ ಸಂಘರ್ಷದಲ್ಲಿ, ಕೆಲವು ದುಷ್ಕರ್ಮಿಗಳು ಛಿಬಿನಾಂಗ್ ಪ್ರದೇಶದಲ್ಲಿ ಹಲವು ಅಂಗಡಿ ಮುಂಗಟ್ಟುಗಳಿಗೆ ಮಂಗಳವಾರ ಬೆಂಕಿ ಹಚ್ಚಿದ್ದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟಿದ್ದರು.
ಬಳಿಕ ಜಿಲ್ಲಾಡಳಿತವು ಕರ್ಫ್ಯೂ ಜಾರಿ ಮಾಡಿ, ಮೊಬೈಲ್ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಿ ಆದೇಶಿಸಿತು. ಇದೀಗ ನಿರ್ಬಂಧವನ್ನು ಗುರುವಾರ ಮಧ್ಯರಾತ್ರಿವರೆಗೆ ವಿಸ್ತರಿಸಲಾಗಿದೆ.
ಸ್ಥಳದಲ್ಲಿ ಮತ್ತೆ ಯಾವುದೇ ಸಂಘರ್ಷ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಸೇನೆ ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಚುನಾವಣೆ ಮುಂದೂಡಿಕೆ
ಏಪ್ರಿಲ್ 10ರಂದು ನಡೆಯಬೇಕಿದ್ದ ಸ್ವಾಯತ್ತ ಜಿಲ್ಲಾ ಮಂಡಳಿ ಚುನಾವಣೆಯನ್ನು ಸಂಘರ್ಷದಲ್ಲಿ ಇಬ್ಬರು ಸಾವಿಗೀಡಾದ ಕಾರಣ ಮುಂದೂಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ತಿಳಿಸಿದರು. 'ಗಾರೊ ಹಿಲ್ಸ್ ಜಿಲ್ಲೆಯ ಸದ್ಯದ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಹಾಗೂ ಅಲ್ಲಿನ ಜನರು ತೊಂದರೆ ಅನುಭವಿಸುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅವರು ಬಿಡುಗಡೆ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ ಬುಧವಾರ ತಿಳಿಸಿದರು.

