ಕುಂಬಳೆ: ಸಾಮಾಜಿಕ ಕಾರ್ಯಗಳಿಗೆ ಪೂರಕವಾದ ಚಟುವಟಿಕೆಗಳಿಗೆ ವಿಶೇಷ ಮುತುವರ್ಜಿಯಿಂದ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಬೆಳವಣಿಗೆ ಮತ್ತು ಅಭಿವೃದ್ಧಿ ಜೊತೆಜೊತೆಯಾಗಿ ಸಾಗಿದಾಗ ಶಾಲೆಯು ಉನ್ನತಿಯನ್ನು ಕಾಣುತ್ತದೆ ಎಂದು ಬೆಂಗಳೂರಿನಲ್ಲಿರುವ ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕ ಎಂ.ಜಿ.ಬಾಲಸುಬ್ರಹ್ಮಣ್ಯ ಹೇಳಿದರು.
ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಸಂಸ್ಥೆಯು ಕೊಡುಗೆಯಾಗಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠಕ್ಕೆ ನೀಡಿದ ವೃತ್ತಿಕೌಶಲ್ಯ ಕೊಠಡಿ ಹಾಗೂ ಭೋಜನ ಶಾಲೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಂಘಟನೆಯ ಮೂಲಕ ಎಲ್ಲವನ್ನೂ ಸಾಸಲು ಸಾಧ್ಯವಿದೆ. ಎಚ್.ಎ.ಎಲ್. ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲವಾಗಿದೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಈ ಕಟ್ಟಡವು ಉಪಯೋಗವಾಗಲಿ ಎಂದರು.
ಹವ್ಯಕ ಅಭ್ಯುದಯ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಅಭಿಮಾನದ ಸಂಸ್ಥೆ ನಮ್ಮ ಊರಿನಲ್ಲಿ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಸಾಮಾಜಿಕ ಜವಾಬ್ದಾರಿಯಿಂದ ನಮ್ಮ ವಿದ್ಯಾಸಂಸ್ಥೆಯ ಏಳಿಗೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಇಂತಹ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ವಿದ್ಯಾಸಂಸ್ಥೆಗಳು ಬೆಳೆಯಲು ಸಾಧ್ಯ ಎಂದರು.
ಹವ್ಯಕ ಅಭ್ಯುದಯ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಜಯಪ್ರಕಾಶ ಪಜಿಲ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀರಾಮಚಂದ್ರಾಪುರ ಮಠದ ವಿದ್ಯಾಸಂಸ್ಥೆಗಳು ಬೆಳಗಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಎಚ್.ಎ.ಎಲ್. ನ ಸಾಮಾಜಿಕ ಬದ್ಧತೆ ಕಾರಣವಾಗಿದೆ. ಎಚ.ಎ.ಎಲ್.ದೇಶದ ಅಭಿಮಾನದ ಸಂಸ್ಥೆಯಾಗಿ ಬೆಳಗುತ್ತಿದೆ ಎಂದರು. ಹೈದರಾಬಾದ್ ಎಚ್.ಎ.ಎಲ್. ಆಡಳಿತ ವ್ಯವಸ್ಥಾಪಕ ಎ.ಎಸ್.ಸಜಿ, ಸೀತಾಂಗೋಳಿ ಎಚ್.ಎ.ಎಲ್.ನ ಸಹಾಯಕ ಅಧಿಕಾರಿ ಜೋಸೆಫ್ ಸಂತೋಷ್ ಮೊಂತೇರಿಯೋ, ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬಜಪ್ಪೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯಕುಮಾರ್ ಮಾಯಿಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಜರಗಿತು.


.jpg)
