ನ್ಯೂಯಾರ್ಕ್: ಇಸ್ರೇಲ್ ಹಾಗೂ ಅಮೆರಿಕದ ದಾಳಿಗೆ ಪ್ರತಿಯಾಗಿ ಗಲ್ಫ್ ದೇಶಗಳ ತೈಲ ಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಈ ವಿಷಯದ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆಸಿತು.
ಸಭೆಯಲ್ಲಿ ಮಾತನಾಡಿದ ಬಹರೈನ್ ರಾಯಭಾರಿ ಜಮಾಲ್ ಅಲ್ ರೋವಿ ಅವರು, ಗಲ್ಫ್ ದೇಶಗಳು ಹಾಗೂ ಜೋರ್ಡಾನ್ ಮೇಲಿನ ಇರಾನ್ ನ ದಾಳಿಯನ್ನು ಅಮಾನುಷ ಎಂದರು. ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸುವ ಮಾರ್ಚ್ 11ರ ನಿರ್ಣಯವನ್ನು ಇರಾನ್ ಗೌರವಿಸಬೇಕು ಎಂದು ಹೇಳಿದರು.
ಈ ಸಂಬಂಧದ ನಿರ್ಣಯವನ್ನು 13-0 ಮತಗಳಿಂದ ಅಂಗೀಕರಿಸಲಾಯಿತು. ರಷ್ಯಾ ಹಾಗೂ ಚೀನಾ ಮತದಾನದಿಂದ ದೂರ ಉಳಿದವು. ಜೊತೆಗೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸರಾಗ ಸಂಚಾರಕ್ಕೆ ತಡೆಯೊಡ್ಡುವುದನ್ನೂ ಇರಾನ್ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ. ಜಾಗತಿಕ ತೈಲ ಸರಬರಾಜಿನ ಶೇಕಡ 20ರಷ್ಟು ತೈಲ ಉತ್ಪನ್ನಗಳು ಈ ಮಾರ್ಗದ ಮೂಲಕ ಸಾಗಾಣಿಕೆಯಾಗುತ್ತವೆ.

