ಕುವೈತ್: ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಪರಿಣಾಮವಾಗಿ ಕುವೈತ್‌ನ ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್ ಸರ್ಕಾರದ ಮಾಧ್ಯಮ ವರದಿ ಮಾಡಿದೆ. ಇರಾನ್ ದಾಳಿಗೆ ಪ್ರತಿಕ್ರಿಯೆ ನೀಡುತ್ತಿರುವುದಾಗಿ ವಿವಿಧ ಕೊಲ್ಲಿ ರಾಷ್ಟ್ರಗಳ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ತನ್ನ ದಾಳಿಗಳನ್ನು ಹೆಚ್ಚಿಸಿದೆ. ಖತರ್‌ನಲ್ಲಿರುವ ಬೃಹತ್ ಅನಿಲ ತಾಣದ ಮೇಲೆಯೂ ದಾಳಿ ನಡೆಸಲಾಗಿದೆ. ದಕ್ಷಿಣ ಪಾರ್ಸ್ ಅನಿಲ ಬಾವಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಈ ದಾಳಿಗಳನ್ನು ನಡೆಸುತ್ತಿದೆ.
ಈ ಕುರಿತು ರಾಷ್ಟ್ರೀಯ ತೈಲ ಕಂಪನಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಕುವೈತ್ ನ್ಯೂಸ್ ಏಜೆನ್ಸಿ ಅಧಿಕಾರಿಯೊಬ್ಬರು, ಶತ್ರುವಿನ ಹಲವು ಡ್ರೋನ್‌ಗಳು ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ತೈಲ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ವರದಿ ತಿಳಿಸಿದೆ.
ಇಂದು (ಶುಕ್ರವಾರ) ಮುಂಜಾನೆ ಇರಾನ್ ನಡೆಸಿದ ದಾಳಿಯಲ್ಲಿ ಶಾರ್ಪ್ನೆಲ್ ಬಿದ್ದು ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬಹ್ರೈನ್ ನ ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ.

