ಕೋಲ್ಕತ್ತ: 'ಪಶ್ಚಿಮ ಬಂಗಾಳದಲ್ಲಿ ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಯುವಂತೆ ಮಾಡುವುದು ನಮ್ಮ ಗುರಿ. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅಳಿಸಿ ಹಾಕುವುದಿಲ್ಲ' ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣದಿಂದ ಜ್ಞಾನೇಶ್ ಕುಮಾರ್ ಅವರು ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿ, ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡರು. ರಾಜಕೀಯ ಪಕ್ಷಗಳು, ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದರು. ಭೇಟಿಯ ಕೊನೇ ದಿನವಾದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
'ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ರಾಜ್ಯದ ಜನರು ಪಾಲ್ಗೊಳ್ಳುತ್ತಾರೆ ಮತ್ತು ಈ ರಾಜ್ಯದ ಜನರು ಶಾಂತಿಪ್ರಿಯರಾಗಿದ್ದಾರೆ. ಮತದಾರರ ಪಟ್ಟಿಯನ್ನು 'ಪವಿತ್ರ'ವಾಗಿಯೇ ಉಳಿಸಲು ನಾವು ಎಸ್‌ಐಆರ್ ನಡೆಸುತ್ತಿದ್ದೇವೆ. ಅರ್ಹರು ಮತದಾರರ ಪಟ್ಟಿಯಲ್ಲಿರಬೇಕು. ದೇಶದ ಇತರೆಡೆ ಯಾವ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಿದ್ದೇವೆಯೊ ಅದೇ ರೀತಿಯಲ್ಲಿಯೇ ಪಶ್ಚಿಮ ಬಂಗಾಳದಲ್ಲೂ ಪ್ರಕ್ರಿಯೆ ನಡೆಸಲಾಗಿದೆ' ಎಂದರು.
'ಮತದಾರರ ಪಟ್ಟಿಯ ಕುರಿತು ಸಲ್ಲಿಸಿರುವ ಆಕ್ಷೇಪಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮತದಾರರ ನೋಂದಣಿ ಅಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗದ ಹಲವು ಪ್ರಕರಣಗಳಿವೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವವರ ಹೆಸರುಗಳನ್ನು 'ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ' ಎಂಬ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ನ್ಯಾಯಾಲಯದ ನಿರ್ದೇಶನದಂತೆಯೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
'ಚುನಾವಣಾ ಅಧಿಕಾರಿಗಳು ಅಥವಾ ಮತದಾರರ ಮೇಲಿನ ಯಾವುದೇ ರೀತಿಯ ಹಿಂಸೆಯನ್ನು ಆಯೋಗ ಸಹಿಸುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸರ್ಕಾರಿ ಅಧಿಕಾರಿಗಳು ಆಯೋಗ ಸೂಚನೆಯಂತೆಯೇ ಕೆಲಸ ಮಾಡಬೇಕು ಮತ್ತು ಇವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು' ಎಂದರು.
'ಗೋ ಬ್ಯಾಕ್' ಘೋಷಣೆ: ಜ್ಞಾನೇಶ್ ಕುಮಾರ್ ಅವರು ಮಂಗಳವಾರ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆಯೂ ಅವರಿಗೆ ಜನರ ಗುಂಪೊಂದು ಕಪ್ಪು ಪಟ್ಟಿ ಪ್ರದರ್ಶಿಸಿ 'ಗೋ ಬ್ಯಾಕ್' ಘೋಷಣೆಗಳನ್ನು ಕೂಗಿತು.
* ಕಾನೂನು ಸುವ್ಯವಸ್ಥೆ ಕಾಪಾಡುವ ಸಿದ್ಧತೆ ನೋಡಿಕೊಂಡು ಎಷ್ಟು ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ. ಈ ಬಗ್ಗೆ ದೆಹಲಿಗೆ ತೆರಳಿದ ಬಳಿಕ ಚರ್ಚಿಸಲಾಗುವುದು
* ಮತದಾನ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಎಂಬ ದೃಷ್ಟಿಯಿಂದ ರಾಜ್ಯದ ಎಲ್ಲ ಮತಗಟ್ಟೆಗಳ ವೆಬ್‌ಕಾಸ್ಟಿಂಗ್ ಮಾಡಲಾಗುವುದು - ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಅಧಿಕಾರಿ
'ಅಗತ್ಯ ನೆರವು ನೀಡಿ'
ಮತದಾರರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳ ಸಂಬಂಧ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಲು ತೆರಳಿರುವ ನ್ಯಾಯಾಂಗದ ಅಧಿಕಾರಗಳಿಗೆ ಅಗತ್ಯ ನೆರವು ನೀಡಿ ಎಂದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಮತ್ತು ಜಾಯ್ ಮಾಲ್ಯಾ ಬಾಗ್ಚಿ ಅವರು ಈ ಸೂಚನೆಗಳನ್ನು ನೀಡಿದರು. 'ಇಲ್ಲಿಯವರೆಗೆ ನ್ಯಾಯಾಂಗದ ಅಧಿಕಾರಿಗಳು ಒಟ್ಟು 10.16 ಲಕ್ಷ ಆಕ್ಷೇಪಣೆಗಳನ್ನು ಪರಿಶೀಲಿಸಿದ್ದಾರೆ' ಎಂದು ಪೀಠ ಹೇಳಿತು.

