ಉತ್ತರಾಖಂಡ ರಾಜ್ಯದಲ್ಲಿರುವ ಛೋಟಾ ಚಾರ್ ಧಾಮ್‌ನ ಭಾಗದಲ್ಲಿ ಈ ಎರಡು ದೇವಾಲಯಗಳಿವೆ.
ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್ ಮೂಲಕ ಮಾರ್ಚ್ 6ರಿಂದ ನೋಂದಣಿ ಆರಂಭವಾಗಿದೆ. ಮೊಬೈಲ್ ಆಯಪ್ ಮೂಲಕ ಆನ್‌ಲೈನ್ ನೋಂದಣಿ ಮಾಡಿಕೊಳ್ಳಲು ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಛೋಟಾ ಚಾರ್ ಧಾಮ್ ಯಾತ್ರೆ ಏಪ್ರಿಲ್ 17ರಿಂದ ಆರಂಭವಾಗಲಿದೆ. ಯಾತ್ರೆ ಆರಂಭವಾಗುವ ಎರಡು ದಿನಗಳ ಮೊದಲು ಆಫ್‌ಲೈನ್ ನೋಂದಣಿ ಕೂಡ ಇರಲಿದೆ. ಇದಕ್ಕಾಗಿ ರಿಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್‌ನಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ದೇವಾಲಯದ ಸಮಿತಿ ತಿಳಿಸಿದೆ. ಏಪ್ರಿಲ್ 19 ರಂದು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲು ತೆರೆಯುವುದರೊಂದಿಗೆ ತೀರ್ಥಯಾತ್ರೆ ಪ್ರಾರಂಭವಾಗಲಿದೆ.
ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಈ ವರ್ಷದಿಂದ ಹಿಂದೂಯೇತರರ ಭಕ್ತರ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ದೇವಾಲಯ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಪ್ರಸ್ತಾವನೆಗೆ ದೇವಾಲಯದ ಸಮಿತಿಯಿಂದ ಅನುಮೋದನೆಯೂ ದೊರೆತಿದೆ. ದೇವಾಲಯದ ಸಂಕೀರ್ಣ ಹಾಗೂ ಗರ್ಭಗುಡಿಯ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ವರದಿಯಾಗಿದೆ.
ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು ಪ್ರವಾಸಿ ತಾಣಗಳಲ್ಲ. ಇವು ಧಾರ್ಮಿಕ ಕೇಂದ್ರಗಳಾಗಿವೆ. ಈ ಎರಡು ಸ್ಥಳಗಳು ಆದಿ ಶಂಕರಾಚಾರ್ಯರು ಸ್ಥಾಪಿಸಿದ ವೈದಿಕ ಕೇಂದ್ರಗಳಾಗಿವೆ.
ದೇವಾಲಯದ ಪ್ರವಾಸ ಹಾಗೂ ಇತರೆ ಮಾಹಿತಿಗಾಗಿ ದೇವಾಲಯ ಸಮಿತಿಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

