ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಸಿಪಿಎಂ ಒಪ್ಪಂದ ಮಾಡಿಕೊಂಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತೊಂದೆಡೆ, ಮಿತ್ರಪಕ್ಷಗಳಿಗೆ ಸೀಟು ಹಂಚಿಕೆ ಮಾಡುವ ಕುರಿತಂತೆ, ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದೆ.
'10 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಎಂ-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ' ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಸಿಪಿಎಂ ಪಕ್ಷವು ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ದನಿಗೂಡಿಸಿದ್ದಾರೆ.
ಕಾಂಗ್ರೆಸ್‌ನ ಮತಗಳನ್ನು ಒಡೆಯುವ ದೃಷ್ಟಿಯಿಂದಲೇ, ಸಿಪಿಎಂ ಹಲವು ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಾಲಕ್ಕಾಡ್‌ನಿಂದ ಹೋಟೆಲ್ ಉದ್ಯಮಿ ಎನ್.ಎಂ.ಆರ್ ರಜಾಕ್ ಅವರನ್ನು ಸಿಪಿಎಂ ಪಕ್ಷವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಅಲ್ಪಸಂಖ್ಯಾತರ ಮತಗಳನ್ನು ಒಡೆಯಲು ಮುಂದಾಗಿದೆ. ಆ ಮೂಲಕ ಮೂಲಕ ಬಿಜೆಪಿಯಿಂದ ಕಣಕ್ಕಿಳಿದಿರುವ ಶೋಭಾ ಸುರೇಂದ್ರನ್ ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ದೂರಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಹಾಗೂ ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದಂತೆ ಸಿಪಿಎಂ ಮೇಲೆ ಪರಿಣಾಮ ಬೀರಲಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಿಲು ಬಿಜೆಪಿಯ ಮಿತ್ರಪಕ್ಷವಾದ ಟ್ವೆಂಟಿ-20 (ಟಿಟಿಪಿ) ಪಕ್ಷದ ಥಾಮಸ್ ಕೆ.ಸ್ಯಾಮುಯೆಲ್ ನಿರಾಕರಿಸಿದ್ದರು. ಈ ಬೆಳವಣಿಗೆಯನ್ನು ಎರಡು ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ದೂರಿದೆ.
ಕಾಂಗ್ರೆಸ್ ಆರೋಪವನ್ನು ಬಿಜೆಪಿ-ಸಿಪಿಎಂ ನಿರಾಕರಿಸಿದೆ.
ರಾಹುಲ್‌ಗೆ ಪಿಣರಾಯಿ ತಿರುಗೇಟು:
'ಕೇಂದ್ರೀಯ ತನಿಖಾ ಸಂಸ್ಥೆಗಳು ಕೇರಳ ಮುಖ್ಯಮಂತ್ರಿ ವಿಜಯನ್ ಅವರನ್ನು ಹೊರತು ಪಡಿಸಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುತ್ತಿವೆ ಅಥವಾ ಕರೆದು ವಿಚಾರಣೆ ನಡೆಸುತ್ತಿವೆ' ಎಂಬ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, 'ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್' ಎಂದು ಹೇಳಿದರು.
ಟಿಕೆಟ್ ಹಂಚಿಕೆ ಗೊಂದಲ: ಇತ್ತೀಚಿಗಷ್ಟೇ, ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿರುವ ಟಿಟಿಪಿಗೆ ರಾಜ್ಯದ ಪ್ರಮುಖ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಇತ್ತೀಚಿಗೆ ನಡೆದ ತ್ರಿಪುನಿಥುರಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಗೆಲುವು ಪಡೆದಿತ್ತು. ಇಲ್ಲಿಂದ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯಲಿದೆ ಎಂದು ಹೇಳಲಾಗಿತ್ತು. ನಂತರ ಟಿಟಿಪಿಗೆ ಕ್ಷೇತ್ರ ಬಿಟ್ಟುಕೊಡಲಾಗಿತ್ತು.
ಟಿಟಿಪಿ ಅಧ್ಯಕ್ಷ ಸಾಬು ಜಾಕೊಬ್ ಅವರೇ ಇಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ನಟಿ ಅಂಜಲಿ ನಾಯರ್ ಅವರನ್ನು ಟಿಟಿಪಿ ಕಣಕ್ಕಿಳಿಸಿದೆ. ಅಲ್ಲದೇ, ಕೊಡನಲ್ಲೂರ್ ಕ್ಷೇತ್ರವನ್ನು ಟಿಟಿಪಿಗೆ ನೀಡಲಾಗಿದೆ.
ತ್ರಿಶ್ಯೂರ್ ಕ್ಷೇತ್ರದಲ್ಲಿ ಬಿ.ಗೋಪಾಲಕೃಷ್ಣನ್ ಅವರಿಗೆ ಟಿಕೆಟ್ ನೀಡುವ ಬದಲಾಗಿ ಹೊಸತಾಗಿ ಪಕ್ಷ ಸೇರ್ಪಡೆಯಾಗಿದ್ದ ಪದ್ಮಜಾ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡಿದೆ. ಪದ್ಮಜಾ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಕೆ.ಕರುಣಾಕರನ್ ಅವರ ಮಗಳು. ಅದೇ ರೀತಿ, ಬಿಜೆಪಿಯ ಹಿರಿಯ ನಾಯಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಅವರನ್ನು ಈ ಸಲ ಕಣಕ್ಕಿಳಿಸಿಲ್ಲ.
ಕೇರಳ ಬಿಜೆಪಿ ಘಟಕದಲ್ಲಿ ಮುಗಿಯದ ಸೀಟು ಹಂಚಿಕೆ ಗೊಂದಲ | ಒಳಒಪ್ಪಂದ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್
ಶಬರಿಮಲೆ-ಯಾರಿಗೆ ಲಾಭ?
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರ ಹಾಗೂ ಚಿನ್ನ ಕಳ್ಳತನ ವಿಚಾರವು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಥವಾ ಎನ್‌ಡಿಎ ನೇತೃತ್ವದ ಬಿಜೆಪಿ ಲಾಭ ತಂದುಕೊಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. 'ಈ ವಿಷಯವನ್ನು ಧಾರ್ಮಿಕ ವಿಚಾರಗಳ ಪರಿಣತರೇ ನಿರ್ಧರಿಸಬೇಕು ಎಂದು 2007ರಲ್ಲಿಯೇ ನಾವು ಪ್ರಮಾಣಪತ್ರವನ್ನು ಸಲ್ಲಿಸಿದ್ದೆವು ಈ ವಿಚಾರಕ್ಕೆ ಈಗಲೂ ನಾವು ಬದ್ಧರಾಗಿದ್ದೇವೆ' ಎಂದು ಕೇರಳದ ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದರು. ಆ ಮೂಲಕ ತನ್ನ ಹಿಂದಿನ ನಿರ್ಧಾರದಿಂದ ಸಿಪಿಐ (ಎಂ) ಹಿಂದೆ ಸರಿದಿತ್ತು. ಚಿನ್ನ ಕಳ್ಳತನದ ಪ್ರಕರಣದಲ್ಲಿ ಸಿಪಿಎಂನ ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರನ್ನು ಬಂಧಿಸಲಾಗಿತ್ತು. ಇದರಿಂದ ಪಕ್ಷವೂ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ಯುಡಿಎಫ್ ಹಾಗೂ ಬಿಜೆಪಿ ರಾಜ್ಯವ್ಯಾಪಿ ಬೃಹತ್ ಹೋರಾಟಗಳನ್ನು ನಡೆಸಿತ್ತು. ಶಬರಿಮಲೆ ವಿಚಾರಕ್ಕಿಂತಲೂ ಹೆಚ್ಚಾಗಿ ರಾಜ್ಯದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದರು. ಶಬರಿಮಲೆ ದೇವಾಲಯ ಇರುವ ಪತ್ತನಂತಿಟ್ಟ ಜಿಲ್ಲೆಯ ಅರನ್‌ಮುಲಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಹಿರಿಯ ನಾಯಕ ಕುಮ್ಮನಂ ರಾಜಶೇಖರ್ ಮಾತ್ರ ಈ ವಿಚಾರ ಪ್ರಮುಖವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಧಾಕರನ್ 'ಚೆಟ್ಟತರಂ'- ಪಿಣರಾಯಿ ವಿವಾದ
ತಿರುವನಂತಪುರಂ: ವಿರೋಧಿಗಳ ವಿರುದ್ಧ ಕಟುಶಬ್ದ ಬಳಸುವ ಮೂಲಕ ಸದಾ ಸುದ್ದಿಯಲ್ಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದೀಗ ಪಕ್ಷದ ಬಂಡಾಯ ನಾಯಕನ ವಿರುದ್ಧ ಕಿಡಿಕಾರಿದ್ದಾರೆ. ಸಿಪಿಐ(ಎಂ) ಭಿನ್ನಮತೀಯ ಹಿರಿಯ ನಾಯಕ ಜಿ.ಸುಧಾಕರನ್ ಅವರು ಈಗಲೂ ಸಂಸದೀಯ ರಾಜಕಾರಣದ ಕುರಿತು ತೀವ್ರ ಆಸಕ್ತಿ ಹೊಂದಿದ್ದು ಅವರ ವರ್ತನೆ ಸಣ್ಣತನದಿಂದ (ಚೆಟ್ಟತರಂ) ಕೂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸುಧಾಕರನ್ 'ಪಿಣರಾಯಿ ಅವರಿಗೆ ಮಲಯಾಳದ ಬಹಳಷ್ಟು ಪದಗಳ ಅರ್ಥಗಳೇ ತಿಳಿದಿಲ್ಲ. ನನಗೆ ರಾಜಕೀಯದ ಆಸಕ್ತಿ ಹೊಂದಿದೆ ಎಂದು ಹೇಳುವ ಪಿಣರಾಯಿ ಅವರು 9ನೇ ಸಲ ಸ್ಪರ್ಧೆಗಿಳಿದಿದ್ದಾರೆ' ಎಂದು ಕಿಡಿಕಾರಿದ್ದಾರೆ.

