ಮುಂಬೈ,: ವಂಚನೆ ಹಾಗೂ ಕ್ರಿಮಿನಲ್ ದುರ್ನಡತೆ ಆರೋಪಕ್ಕೆ ಸಂಬಂಧಿಸಿ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್‌ನ ಮಾಜಿ ನಿರ್ದೇಶಕರಾದ ಸತೀಶ್ ಸೇಠ್ ಹಾಗೂ ಗೌತಮ್ ಬಿ.ದೋಶಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಂಪೆನಿ ಬ್ಯಾಂಕ್‌ಗೆ ವಂಚಿಸಿದೆ. ಇದರಿಂದ 114.98 ಕೋ.ರೂ. ನಷ್ಟ ಉಂಟಾಗಿದೆ ಎಂದು ಬ್ಯಾಂಕ್ ಆರೋಪಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11 ಬ್ಯಾಂಕ್‌ಗಳ ಒಕ್ಕೂಟದ ಸದಸ್ಯ. ಈ ಒಕ್ಕೂಟ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್‌ಗೆ 735 ಕೋ.ರೂ. ಅವಧಿ ಸಾಲ ಮಂಜೂರು ಮಾಡಿದೆ.
ಸಿಬಿಐ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಬಳಿಕ ಮುಂಬೈಯಲ್ಲಿರುವ ಸತೀಶ್ ಸೇಠ್, ಗೌತಮ್ ಬಿ. ದೋಶಿ ಅವರ ನಿವಾಸ ಹಾಗೂ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್‌ನ ನೋಂದಾಯಿತ ಕಚೇರಿ ಮೇಲೆ ದಾಳಿ ನಡೆಸಿದೆ.

