ನವದೆಹಲಿ: 'ಅಸ್ಸಾಂ ರಾಜ್ಯವು ಸುದೀರ್ಘ ಕಾಲ ಅಸ್ಥಿರತೆಯನ್ನು ಕಂಡಿದೆ. ಆದರೆ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲ ಪ್ರಯತ್ನಗಳನ್ನು ಮಾಡಿದ್ದರಿಂದ ಕಳೆದ ದಶಕದಲ್ಲಿ ಪರಿಸ್ಥಿತಿ ಬದಲಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಬಿಜೆಪಿ ಅಸ್ಸಾಂ ರಾಜ್ಯ ಘಟಕದ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈಶಾನ್ಯ ಭಾಗದ ವಿವಿಧ ಸಂಘಟನೆಗಳೊಂದಿಗೆ ಹನ್ನೆರಡು ಶಾಂತಿ ಒಪ್ಪಂದಗಳಿಗೆ ಸರ್ಕಾರ ಸಹಿ ಹಾಕಿದೆ ಎಂದು ತಿಳಿಸಿದ್ದಾರೆ.
'ಕಾಂಗ್ರೆಸ್ ಪಕ್ಷವು ಈ ಹಿಂದೆ ಪ್ರಚಾರ ಗಿಟ್ಟಿಸುವ ಮತ್ತು ಜನರ ದಾರಿ ತಪ್ಪಿಸುವ ಉದ್ದೇಶದಿಂದ ಮಾತ್ರ ಶಾಂತಿ ಒಪ್ಪಂದ ಮಾಡಿತ್ತು ಎಂಬುದನ್ನು ಬಿಜೆಪಿ ಕಾರ್ಯಕರ್ತರು ಜನರಿಗೆ ನೆನಪಿಸಬೇಕು' ಎಂದು ಪ್ರಧಾನಿ ಹೇಳಿದ್ದಾರೆ.
'ಅಸ್ಸಾಂ ರಾಜ್ಯವು ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿದ್ದ ಕಾಲವನ್ನು ನಾವು ನೋಡಿದ್ದೇವೆ. ಈ ರಾಜ್ಯ ದೀರ್ಘಾವಧಿಯ ಅಸ್ಥಿರತೆಯನ್ನು ಕಂಡಿದೆ. ಆದರೆ ಕಳೆದ ದಶಕದಲ್ಲಿ ಪರಿಸ್ಥಿತಿ ಬದಲಾಗಿದ್ದು, ಶಾಂತಿ ಸ್ಥಾಪನೆಯಾಗಿರುವುದರಿಂದ ಜನರಲ್ಲಿ ನಾವು ಹೊಸ ಆತ್ಮವಿಶ್ವಾಸವನ್ನು ಕಾಣಬಹುದು' ಎಂದಿದ್ದಾರೆ.
'ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಶಾಂತಿ ಒಪ್ಪಂದಗಳನ್ನು ಕಡೆಗಣಿಸಲಾಗಿತ್ತು ಮತ್ತು ಯುವ ಜನರು ಹಲವು ತೊಂದರೆ ಅನುಭವಿಸಿದ್ದಾರೆ. ಬಂಡುಕೋರರು ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗಿನ ಯಾವುದೇ ಒಪ್ಪಂದ ಕೂಡಾ ಕಾಂಗ್ರೆಸ್ ಇದ್ದ ಸಂದರ್ಭದಲ್ಲಿ ಪರಿಣಾಮಕಾರಿ ಎನಿಸಲಿಲ್ಲ' ಎಂದು ಆರೋಪಿಸಿದ್ದಾರೆ.
'ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಯುವಕರ ಭವಿಷ್ಯವನ್ನು ಉಜ್ವಲಗೊಳಿಸಲು ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ. ನಾವು ಶಾಂತಿ ಒಪ್ಪಂದಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಕಳೆದ ದಶಕದಲ್ಲಿ ಪ್ರಾಮಾಣಿಕ ಪ್ರಯತ್ನಗಳ ಮೂಲಕ ಶಾಂತಿಯನ್ನು ಹೇಗೆ ಸ್ಥಾಪಿಸಲಾಗಿದೆ ಎಂಬುದಕ್ಕೆ ಅಸ್ಸಾಂ ಸಾಕ್ಷಿಯಾಗಿದೆ' ಎಂದು ಹೇಳಿದ್ದಾರೆ.
'ಬಾಂಗ್ಲಾ ನುಸುಳುಕೋರರಿಗೆ ಕಾಂಗ್ರೆಸ್ ರಕ್ಷಣೆ'
ಜಾಗೀರೋಡ್ (ಅಸ್ಸಾಂ): 'ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ಅಸ್ಸಾಂ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಸೋಮವಾರ ಆರೋಪಿಸಿದರು.
ಮೊರೀಗಾಂವ್ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು 'ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂನ ಸಾಂಪ್ರದಾಯಿಕ ಸ್ಕಾರ್ಫ್ 'ಗಮ್ಛಾ' ನೀಡಿದಾಗ ಅದನ್ನು ಧರಿಸಲಿಲ್ಲ. ಆ ಮೂಲಕ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ' ಎಂದು ಟೀಕಿಸಿದರು.
'ಆದರೆ ರಾಹುಲ್ ಅವರು ಆಗಿಂದಾಗ್ಗೆ ಮಸೀದಿಗೆ ಭೇಟಿ ನೀಡುತ್ತಾರೆ ಮತ್ತು ಬಹಳ ಸಂತೋಷದಿಂದ ಟೋಪಿ ಧರಿಸುತ್ತಾರೆ' ಎಂದರು.
'ಕಾಂಗ್ರೆಸ್ ಅವಧಿಯಲ್ಲಿ ಅಕ್ರಮವಾಗಿ ಪ್ರವೇಶಿಸಿರುವ ಬಾಂಗ್ಲಾದೇಶಿ ನುಸುಳುಕೋರರಿಗೆ ನಿರ್ಗಮನದ ಬಾಗಿಲನ್ನು ಬಿಜೆಪಿ ಸರ್ಕಾರ ತೋರಿಸುತ್ತಿದೆ. ಬಿಜೆಪಿ ಆಡಳಿತದ 10 ವರ್ಷಗಳಲ್ಲಿ ಅಸ್ಸಾಂ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ' ಎಂದು ಪ್ರತಿಪಾದಿಸಿದರು.

