ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ವಿಸ್ತರಿಸಲು ಅಮೆರಿಕದ ನೂರಾರು ವಿಶೇಷ ಕಾರ್ಯಾಚರಣೆ ಪಡೆಗಳು ಪಶ್ಚಿಮ ಏಷ್ಯಾಕ್ಕೆ ತಲುಪಿವೆ. ಈಗಾಗಲೇ ಅಲ್ಲಿ ಬೀಡುಬಿಟ್ಟಿರುವ ಸಾವಿರಾರು ವಾಯುಸೇನೆ ಮತ್ತು ಭೂಸೇನಾ ಅರೆಸೇನಾ ಪಡೆಗಳ ಜೊತೆಗೆ ಈ ತಂಡ ಸೇರಿಕೊಳ್ಳಲಿವೆ ಎಂದು ಅಮೆರಿಕದ ಇಬ್ಬರು ಮಿಲಿಟರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಆರ್ಮಿ ರೇಂಜರ್ಸ್, ನೇವಿ ಸೀಲ್ಸ್ ಸಿಬ್ಬಂದಿಯನ್ನು ಒಳಗೊಂಡಿರುವ ಈ ಕಮಾಂಡೊಗಳಿಗೆ ಇನ್ನೂ ನಿರ್ದಿಷ್ಟ ಕೆಲಸ ವಹಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೆಸರನ್ನು ಗೋಪ್ಯವಾಗಿ ಇಡಬೇಕೆಂಬ ಷರತ್ತಿನೊಂದಿಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ವಿಶೇಷ ತರಬೇತಿ ಪಡೆದ ಈ ಭೂಸೇನಾ ಪಡೆಯನ್ನು ಇರಾನ್ ಮುಚ್ಚಿರುವ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಬಳಸಿಕೊಳ್ಳುವ ಸಾಧ್ಯತೆಯಿದೆ. ಅಥವಾ ಪರ್ಷಿಯನ್ ಕೊಲ್ಲಿಯ ಉತ್ತರದ ಭಾಗದಲ್ಲಿರುವ ಇರಾನ್‌ನ ತೈಲ ಕೇಂದ್ರವಾದ ಖರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಯೋಜನೆಗಾಗಿಯೂ ಇವರನ್ನು ನಿಯೋಜಿಸಬಹುದು. ಅಲ್ಲದೆ ಇಸ್ಫಹಾನ್ ಪರಮಾಣು ಕೇಂದ್ರದಲ್ಲಿರುವ ಇರಾನ್‌ನ ಸಮೃದ್ಧ ಯುರೇನಿಯಂ ಅನ್ನು ಗುರಿಯಾಗಿಸಿಕೊಂಡು ನಡೆಸುವ ಕಾರ್ಯಾಚರಣೆಯಲ್ಲಿ ಇವರನ್ನು ಬಳಸಿಕೊಳ್ಳಬಹುದು ಎಂದು ಗೊತ್ತಾಗಿದೆ.
ಕೆಲ ದಿನಗಳ ಹಿಂದಷ್ಟೇ ಈ ಪ್ರದೇಶಕ್ಕೆ ಆಗಮಿಸಿದ್ದ 2,500 ಮರೀನ್ ಮತ್ತು 2,500 ನೌಕಾಪಡೆ ಯೋಧರೊಂದಿಗೆ ಈ ಕಮಾಂಡೊಗಳು ಸೇರಿಕೊಂಡಿದ್ದಾರೆ. ಒಟ್ಟಾರೆಯಾಗಿ ಸದ್ಯ ಮಧ್ಯಪ್ರಾಚ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಅಮೆರಿಕ ಸೈನಿಕರಿದ್ದಾರೆ.
ಸೌದಿ ಅರೇಬಿಯಾ, ಬಹರೇನ್, ಇರಾಕ್, ಸಿರಿಯಾ, ಜೋರ್ಡಾನ್, ಕತಾರ್, ಯುಎಇ ಮತ್ತು ಕುವೈತ್ ಸೇರಿದಂತೆ ಈ ಪ್ರದೇಶದ ವಿವಿಧ ನೆಲೆಗಳಲ್ಲಿ ಮತ್ತು ಹಡಗುಗಳಲ್ಲಿ ಸುಮಾರು 40 ಸಾವಿರ ಅಮೆರಿಕ ಸೈನಿಕರು ಇರುತ್ತಾರೆ. ಆದರೆ ಇರಾನ್ ಮೇಲಿನ ಯುದ್ಧವನ್ನು ತೀವ್ರಗೊಳಿಸಿರುವುದರಿಂದ, ಈ ಸಂಖ್ಯೆ 50 ಸಾವಿರ ದಾಟಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅರೆಸೇನಾ ಪಡೆಗಳು ಇರುವ ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಇರಾನ್ ಮೇಲೆ ದಾಳಿ ನಡೆಸುವಷ್ಟು ಸಮೀಪದಲ್ಲಿ ಇರಲಿದ್ದಾರೆ ಎಂದು ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ. ಆದರೆ, 50 ಸಾವಿರಕ್ಕೂ ಸೈನಿಕರು ಯಾವುದೇ ದೊಡ್ಡ ಮಟ್ಟದ ಭೂ ಕಾರ್ಯಾಚರಣೆಗೆ ಬಹಳ ಕಡಿಮೆ ಸಂಖ್ಯೆಯಾಗಿದೆ ಎಂದು ಮಿಲಿಟರಿ ತಜ್ಞರು ಎಚ್ಚರಿಸಿದ್ದಾರೆ. 2023ರ ಅಕ್ಟೋಬರ್‌ನಲ್ಲಿ ಗಾಜಾ ಪಟ್ಟಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದಾಗ ಇಸ್ರೇಲ್ 3 ಲಕ್ಷಕ್ಕೂ ಅಧಿಕ ಸೈನಿಕರನ್ನು ಬಳಸಿತ್ತು. 2003ರಲ್ಲಿ ಇರಾಕ್ ಮೇಲೆ ಆಕ್ರಮಣ ಮಾಡಿದ ಅಮೆರಿಕ ನೇತೃತ್ವದ ಒಕ್ಕೂಟವು ಸುಮಾರು 2.5 ಲಕ್ಷ ಸೈನಿಕರನ್ನು ಹೊಂದಿತ್ತು.
ಅಮೆರಿಕದ ಒಟ್ಟು ಭೂಭಾಗದ ಸುಮಾರು ಮೂರನೇ ಒಂದು ಭಾಗದಷ್ಟು ವಿಸ್ತೀರ್ಣ ಹೊಂದಿರುವ ಇರಾನ್‌ನಲ್ಲಿ 9.3 ಕೋಟಿ ಜನಸಂಖ್ಯೆ ಇದೆ. ಇಷ್ಟು ದೊಡ್ಡ ಗಾತ್ರ, ಸಂಕೀರ್ಣತೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶವನ್ನು ಕೇವಲ 50 ಸಾವಿರ ಸೈನಿಕರೊಂದಿಗೆ ವಶಪಡಿಸಿಕೊಳ್ಳುವುದು ಅಥವಾ ಹಿಡಿತದಲ್ಲಿಟ್ಟುಕೊಳ್ಳುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

