ಚೆನ್ನೈ: ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಕಾನ್ಸುಲ್ ಜನರಲ್ ಆಗಿ ಮರಿಯಾನಾ ಎಲ್. ನೇಸ್ಯುಲರ್ ಅವರು ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಮರಿಯಾನಾ ಅವರು, 'ದಕ್ಷಿಣ ಭಾರತದಲ್ಲಿ ಅಮೆರಿಕಾವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂದ ಗೌರವ ಎಂದೇ ಭಾವಿಸುತ್ತೇನೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾರ್ಯದರ್ಶಿ ರುಬಿಯೊ ಹಾಗೂ ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಅವರ ನಾಯಕತ್ವದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವತ್ತ ಗಮನ ಹರಿಸುತ್ತೇವೆ. ವ್ಯಾಪಾರ ಸೇರಿದಂತೆ ಇತರ ಸಂಬಂಧಗಳನ್ನು ವೃದ್ಧಿಪಡಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ' ಎಂದರು.
ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯು ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್-ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳ ವ್ಯಾಪ್ತಿ ಹೊಂದಿದೆ.
ಈ ಮೊದಲು ಮರಿಯಾನಾ ಅವರು ಜೆರುಸಲೇಂ, ಆಮ್ಮನ್ ಹಾಗೂ ತಾಷ್ಕೆಂಟ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

