ನವದೆಹಲಿ: ಕೃಷಿ ಭಾರತದ ಆರ್ಥಿಕತೆಯ ಆಧಾರಸ್ತಂಭ. ಹೀಗಾಗಿ ಅಧಿಕ ಮೌಲ್ಯವಿರುವ ಕೃಷಿಗೆ ಆದ್ಯತೆ ನೀಡಿ. ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆ ನೀಡಿದರು.
ಬಜೆಟ್ ನಂತರದ 'ಕೃಷಿ ಮತ್ತು ಗ್ರಾಮೀಣ ಪ್ರದೇಶದ ರೂಪಾಂತರ' ಕುರಿತ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, 'ಜಾಗತಿಕ ಬೇಡಿಕೆಗೆ ಅನುಗುಣವಾಗಿ ಭಾರತದ ಕೃಷಿ ಉತ್ಪನ್ನಗಳು ಹೆಚ್ಚೆಚ್ಚು ರಫ್ತಾಗುವಂತೆ ಮಾಡಬೇಕಿದೆ. ನಮ್ಮಲ್ಲಿ ವೈವಿಧ್ಯಮಯ ವಾತಾವರಣವಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ' ಎಂದು ಹೇಳಿದರು.
'ಜಗತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಿದ್ದು, ಸಾವಯವ ಆಹಾರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ. ಹೀಗಾಗಿ ನಾವು ರಾಸಾಯನಿಕ ಮುಕ್ತ ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಸಾವಯವ ಕೃಷಿಯು ಜಗತ್ತಿನಾದ್ಯಂತ ಮಾರುಕಟ್ಟೆ ತಲುಪುವ ರಹದಾರಿಯನ್ನು ಸೃಷ್ಟಿಸುತ್ತದೆ' ಎಂದು ಪ್ರತಿಪಾದಿಸಿದರು.
ಭಾರತದ ದೀರ್ಘಕಾಲಿಕ ಅಭಿವೃದ್ಧಿಯ ಹಾದಿಯಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಆಧಾರಸ್ತಂಭ. ಸರ್ಕಾರವು ಕೃಷಿ ವಲಯವನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

