ನವದೆಹಲಿ: ಭಾರತದ ರಿಫೈನರಿಗಳು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ತಾನು ವಿಧಿಸಿರುವ ನಿರ್ಬಂಧದಲ್ಲಿ 30 ದಿನಗಳಷ್ಟು ವಿನಾಯಿತಿ ನೀಡಿರುವ ಅಮೆರಿಕದ ಕ್ರಮ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷ ಶುಕ್ರವಾರ ವಾಗ್ದಾಳಿ ನಡೆಸಿದೆ.
'ರಾಜಿ ಮಾಡಿಕೊಂಡಿರುವ ಒಬ್ಬ ವ್ಯಕ್ತಿಯನ್ನು (ಪ್ರಧಾನಿ ಮೋದಿ) ತನ್ನ ಲಾಭಕ್ಕಾಗಿ ಅಮೆರಿಕ ಬಳಸಿಕೊಳ್ಳುತ್ತಿದೆ. ಭಾರತದ ಸದ್ಯದ ವಿದೇಶಾಂಗ ನೀತಿಯು ಇಂತಹ ನಡೆಗಳ ಫಲಿತವಾಗಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾರತದ ವಿದೇಶಾಂಗ ನೀತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟೀಕಿಸಿದ್ದು,'ಕೇಂದ್ರ ಸರ್ಕಾರ ಮೇಲಿಂದ ಮೇಲೆ ದೇಶದ ರಾಜತಾಂತ್ರಿಕ ಅವಕಾಶವನ್ನು ಬೇರೆಯವರಿಗೆ ಒಪ್ಪಿಸುತ್ತಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ದೇಶದ ಇಂಧನ ಸುರಕ್ಷತೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಿ ಮಾಡಿಕೊಂಡಿದೆ' ಎಂಬುದಾಗಿ ಸಂಸತ್‌ನ ಬಜೆಟ್ ಅಧಿವೇಶನ ವೇಳೆ ಲೋಕಸಭೆಯಲ್ಲಿ ಫೆಬ್ರುವರಿ 11ರಂದು ತಾವು ಮಾಡಿದ್ದ ಭಾಷಣವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ,'ಭಾರತ ಯಾರಿಂದ ತೈಲ ಖರೀದಿ ಮಾಡಬೇಕು, ಯಾರಿಂದ ಖರೀದಿ ಮಾಡಬಾರದು ಎಂಬುದನ್ನು ಅಮೆರಿಕ ನಿರ್ಧರಿಸುತ್ತಿದೆ. ಈ ಕುರಿತು ನಮ್ಮ ಪ್ರಧಾನಿ ನಿರ್ಧಾರ ಕೈಗೊಳ್ಳುವುದಿಲ್ಲ' ಎಂದು ಟೀಕಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣಿಸುತ್ತಿರುವ ಕಾರಣ, ಬಾರತರ ರಿಫೈನರಿಗಳು ರಷ್ಯಾದಿಂದ ತೈಲು ಖರೀದಿಸಲು ಅನುಕೂಲವಾಗಲು 30 ದಿನ ಅವಕಾಶ ನೀಡಿ ನಿರ್ಬಂಧ ಸಡಿಲಿಸಲಾಗುತ್ತದೆ' ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷ ಟೀಕಾಪ್ರಹಾರ ನಡೆಸಿದೆ.

