ಕರಾಚಿ: ಇರಾನ್ ನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ಉಂಟಾದ ಆಕ್ರೋಶದ ನಡುವೆ ಪಾಕಿಸ್ತಾನದ ಕರಾಚಿ ನಗರದಲ್ಲಿರುವ ಅಮೆರಿಕದ ದೂತಾವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗಲಭೆಗೆ ತಿರುಗಿದೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಎಧಿ ರಕ್ಷಣಾ ಸೇವೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ವೈರಲ್ ಆಗಿರುವ ವೀಡಿಯೊ ದೃಶ್ಯಗಳಲ್ಲಿ, ಪ್ರತಿಭಟನಾಕಾರರು ಕರಾಚಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಕಚೇರಿಯ ಕಿಟಕಿಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಒಡೆದು ಹಾಕುತ್ತಿರುವುದು ಕಂಡುಬಂದಿದೆ. ಕೆಲವರು ಕಟ್ಟಡದೊಳಗೆ ನುಗ್ಗಲು ಪ್ರಯತ್ನಿಸಿದರೆ, ಇನ್ನು ಕೆಲವರು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.
ಖಾಮಿನೈಯವರ ಹತ್ಯೆ ಸುದ್ದಿ ಹೊರಬಿದ್ದ ಬಳಿಕ ಕರಾಚಿಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಆಕ್ರೋಶಿತ ಜನರು ರಾಯಭಾರಿ ಕಚೇರಿಗೆ ತೆರಳಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಗಲಭೆ ತೀವ್ರಗೊಂಡಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಲು ಕ್ರಮ ಕೈಗೊಂಡರು. ಈ ವೇಳೆ ಉಂಟಾದ ತಳ್ಳಾಟ, ಗದ್ದಲದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ದೂತಾವಾಸ ಪ್ರದೇಶದ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತೆ ಕಲ್ಪಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

