HEALTH TIPS

ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ

 ನವದೆಹಲಿ: 'ನಮ್ಮದು ಪಾಕಿಸ್ತಾನದಂತೆ ದಲ್ಲಾಳಿ ಕೆಲಸ ಮಾಡುವ ದೇಶವಲ್ಲ...'

- ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನ ಮಾಡುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಕೇಂದ್ರ ಸರ್ಕಾರ ಬುಧವಾರ ನೀಡಿರುವ ಉತ್ತರ ಇದು. 


ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚಿಸುವ ಸಲುವಾಗಿ ಸಂಸತ್‌ ಭವನ ಸಂಕೀರ್ಣದಲ್ಲಿ ಆಯೋಜಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಈ ಮಾತು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

'ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ ನಿಲ್ಲಿಸಲು ತಾನು ಮಧ್ಯಸ್ಥಿಕೆ ವಹಿಸಲು ಯತ್ನಿಸುತ್ತಿರುವುದಾಗಿ ಪಾಕಿಸ್ತಾನ ಹೇಳುತ್ತಿದ್ದು, ಇದು ಹೊಸ ವಿಚಾರ ಅಲ್ಲ. ಪಾಕಿಸ್ತಾನವನ್ನು ಅಮೆರಿಕ 1981ರಿಂದಲೂ ತನ್ನ ಉದ್ದೇಶ ಸಾಧನೆಗೆ 'ಬಳಕೆ' ಮಾಡುತ್ತಿದೆ ಎಂಬುದಾಗಿ ಜೈಶಂಕರ್‌ ಹೇಳಿದರು' ಎಂದು ಇವೇ ಮೂಲಗಳು ತಿಳಿಸಿವೆ.

'ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಕುರಿತು ಭಾರತ ಮೌನ ತಾಳಿದೆ' ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಜೈಶಂಕರ್‌ ತಳ್ಳಿ ಹಾಕಿದರು. ಅಲ್ಲಿನ ಪರಿಸ್ಥಿತಿ ಹಾಗೂ ಬೆಳವಣಿಗೆಗಳ ಕುರಿತು ಭಾರತ ಪ್ರತಿಕ್ರಿಯಿಸುತ್ತಿದೆ ಎಂಬುದಾಗಿ ಹೇಳಿದರು' ಎಂದೂ ತಿಳಿಸಿವೆ.

'ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಯುದ್ಧ ನಿಲ್ಲಬೇಕು. ಇದು ಜಗತ್ತಿನ ಪ್ರತಿಯೊಬ್ಬರನ್ನೂ ಬಾಧಿಸುತ್ತಿದೆ ಎಂಬುದಾಗಿ ಮೋದಿ ಸ್ಪಷ್ಟ ಮಾತುಗಳಲ್ಲಿ ಭಾರತದ ನಿಲುವನ್ನು ವಿವರಿಸಿದರು' ಎಂದು ಮೂಲಗಳು ಹೇಳಿವೆ.

'ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಸಾವಿಗೆ ಭಾರತ ಸಂತಾಪ ಸೂಚಿಸಲಿಲ್ಲ. ಇಂಥ ನಡೆ ಮೂಲಕ, ಭಾರತ ತನ್ನ ನೈತಿಕ ದೌರ್ಬಲ್ಯ ಪ್ರದರ್ಶಿಸಿತು ಎಂಬ ವಿಪಕ್ಷಗಳ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿತು'.

'ಇರಾನ್‌ನ ರಾಯಭಾರ ಕಚೇರಿ ಕಾರ್ಯಾರಂಭ ಮಾಡಿದ ವೇಳೆ, ವಿದೇಶಾಂಗ ಕಾರ್ಯದರ್ಶಿ ಅಲ್ಲಿಗೆ ತಕ್ಷಣವೇ ಭೇಟಿ ನೀಡಿ, ಶೋಕ ಸಂದೇಶ ಪುಸ್ತಕದಲ್ಲಿ ಭಾರತದ ಸಂತಾಪ ತಿಳಿಸುವ ಸಂದೇಶ ಬರೆದು ಸಹಿ ಹಾಕಿದರು ಎಂದು ವಿಪಕ್ಷಗಳಿಗೆ ಸರ್ಕಾರ ವಿವರಿಸಿತು'.

'ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿರುವ ಭಾರತೀಯರ ಸುರಕ್ಷತೆ ಹಾಗೂ ದೇಶದ ಇಂಧನ ಬೇಡಿಕೆಗಳನ್ನು ಪೂರೈಸುವುದು ತನಗೆ ಮುಖ್ಯ. ಈ ವಿಚಾರದಲ್ಲಿ ತಾನು ಯಶಸ್ಸು ಕಂಡಿದ್ದಾಗಿ ಕೂಡ ಸರ್ಕಾರ ಸ್ಪಷ್ಟಪಡಿಸಿತು' ಎಂದು ಮೂಲಗಳು ಹೇಳಿವೆ.

'ನಾವು ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ನೀಡಿರುವ ಉತ್ತರಗಳು ತೃಪ್ತಿದಾಯಕವಾಗಿಲ್ಲ. ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆ ನಡೆಯಬೇಕು ಎಂಬುದಾಗಿ ವಿರೋಧ ಪಕ್ಷಗಳ ಪಾಳಯ ಸಭೆಗೆ ತಿಳಿಸಿತು' ಎನ್ನಲಾಗಿದೆ.ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಸಭೆಗೆ ಮಾಹಿತಿ ನೀಡಿದರು.

ಭದ್ರತೆ ಕುರಿತ ಸಂಸದೀಯ ಸಮಿತಿ(ಸಿಸಿಎಸ್‌) ಸದಸ್ಯರು ಹಾಗೂ ಕೇಂದ್ರ ಸಚಿವರೂ ಆದ ರಾಜನಾಥ್‌ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್‌, ಜೆ.ಪಿ.ನಡ್ಡಾ, ಕಿರಣ್‌ ರಿಜಿಜು ಸರ್ಕಾರವನ್ನು ಪ್ರತಿನಿಧಿಸಿದ್ದರು.

ತಾರಿಕ್‌ ಅನ್ವರ್ ಹಾಗೂ ಮುಕುಲ್ ವಾಸ್ನಿಕ್‌(ಕಾಂಗ್ರೆಸ್‌), ಧರ್ಮೇಂದ್ರ ಯಾದವ್(ಸಮಾಜವಾದಿ ಪಕ್ಷ), ಸಸ್ಮಿತ್‌ ಪಾತ್ರಾ(ಬಿಜೆಡಿ) ಸೇರಿ ಹಲವರು ವಿಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries