ನವದೆಹಲಿ: ತನ್ನ ನೂತನ ಹಾಡು 'ಟಟೀರಿ'ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಕುರಿತು ಆಕ್ಷೇಪಾರ್ಹ ಸಾಹಿತ್ಯ ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗಾಯಕ-ರ್ಯಾಪರ್ ಬಾದ್‌ಶಾಹ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೀವ ಬೆದರಿಕೆಯನ್ನೊಡ್ಡಿದೆ.
ಬಿಷ್ಣೋಯಿ ಗ್ಯಾಂಗ್ ಸದಸ್ಯರು 'ನಿನ್ನ ಹಣೆಗೆ ಗುಂಡಿಕ್ಕುವುದಾಗಿ' ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಾದ್‌ಶಾಹ್‌ಗೆ ಬೆದರಿಕೆ ಹಾಕಿದ್ದಾರೆ.
'ಗಾಯಕ ಬಾದ್‌ಶಾಹ್, ನೀವು ಹರ್ಯಾಣದ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸಿದ್ದೀರಿ. 2024ರಲ್ಲಿ ನಿಮ್ಮ ಕ್ಲಬ್‌ನಲ್ಲಿ ನಾವು ನಿಮಗೆ ಟ್ರೇಲರ್ ತೋರಿಸಿದ್ದೆವು; ಮುಂದಿನ ಸಲ ನೇರವಾಗಿ ನಿಮ್ಮ ಹಣೆಗೇ ಗುಂಡು ಹಾರಿಸುತ್ತೇವೆ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
2024ರಲ್ಲಿ ಚಂಡೀಗಡದಲ್ಲಿ ಬಾದ್‌ಶಾಹ್ ಒಡೆತನದ 'ಸೆವಿಲ್ಲೆ ಬಾರ್ ಆಯಂಡ್ ಲೌಂಜ್'ನ ಹೊರಗೆ ಸ್ಫೋಟ ಸಂಭವಿಸಿತ್ತು. ಲಾರೆನ್ಸ್ ಬಿಷ್ಣೋಯಿ ಜೊತೆ ಗುರುತಿಸಿಕೊಂಡಿರುವ ಕೆನಡಾ ಮೂಲದ ಗೋಲ್ಡಿ ಬ್ರಾರ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಿಷ್ಣಯಿ ಗ್ಯಾಂಗಿನ ಸದಸ್ಯರೆನ್ನಲಾಗಿರುವ ರಣದೀಪ್ ಮಲ್ಲಿಕ್ ಮತ್ತು ಅನಿಲ್ ಪಂಡಿತ್ ಅವರು ಇತ್ತೀಚಿಗೆ ಪಾಣಿಪತ್‌ನಲ್ಲಿ ವೆಸ್ಟರ್ನ್ ಯೂನಿಯನ್ ಕಚೇರಿಯ ಹೊರಗೆ ನಡೆದಿದ್ದ ಗುಂಡು ಹಾರಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ಬಾದ್‌ಶಾಹ್ ಅವರ ಇತ್ತೀಚಿನ ಹರ್ಯಾಣ್ವಿ ಹಾಡು 'ಟಟೀರಿ' ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಪಂಚಕುಲಾ ನಿವಾಸಿಯೋರ್ವರ ದೂರಿನ ಮೇರೆಗೆ ಬಾದ್‌ಶಾಹ್ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಈ ಹಾಡು ಬಾದ್‌ಶಾಹ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡ ಬೆನ್ನಲ್ಲೇ ವೈರಲ್ ಆಗಿತ್ತು.
ಕಳೆದ ವಾರ ಕ್ಷಮೆ ಯಾಚಿಸಿದ್ದ ಬಾದ್‌ಶಾಹ್, ಈ ಹಾಡಿನಿಂದ ಯಾರಿಗೂ ನೋವನ್ನುಂಟು ಮಾಡಲು ತಾನೆಂದಿಗೂ ಉದ್ದೇಶಿಸಿರಲಿಲ್ಲ ಎಂದು ಹೇಳಿದ್ದರು.

