ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ನೀರ್ಚಾಲು ಸನಿಹದ ಕನ್ಯಪ್ಪಾಡಿಯಲ್ಲಿ ಭಾರೀ ಗಾತ್ರದ ಕಾಡುಕೋಣ ಕಂಡುಬಂದಿದೆ. ಸೋಮವಾರ ತಡರಾತ್ರಿ ಇಲ್ಲಿನ ಬಸ್ ನಿಲ್ದಾಣ ವಠಾರದಲ್ಲಿ ಕಡುಕೋಣ ಸಂಚರಿಸುತ್ತಿರುವುದನ್ನು ಕೆಲವರು ತಮ್ಮ ಮೊಬೈಲಲ್ಲಿ ಸಎರೆಹಿಡಿದಿದ್ದರೆ, ಇನ್ನುಬೀದಿನಾಯಿಗಳು ಕಾಡುಕೋಣವನ್ನು ಸುತ್ತುವರಿಯುತ್ತಿದ್ದಂತೆ ಇವುಗಳ ಮೇಲೆ ದಾಳಿಗೆ ಮುಂದಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ನಂತರ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳು ತಲುಪುತ್ತಿದ್ದಂತೆ ಭೀತಿಗೊಂಡ ಕಾಡುಕೋಣ ಅಲ್ಲಿಂದ ಪರಾರಿಯಾಗಿದೆ.
ಕನ್ಯಪಾಡಿ ಆಸುಪಾಸಿನ ಕಾಡಿನಲ್ಲಿ ಕೆಲವು ದಿನಗಳ ಹಿಂದೆ ಕಾಡುಕೋಣ ಕಂಡುಬಂದಿರುವ ಬಗ್ಗೆ ವದಂತಿ ಹರಡಿದ್ದು, ಸೋಮವಾರ ರಾತ್ರಿ ಪೇಟೆಯಲ್ಲಿ ಪ್ರತ್ಯಕ್ಷಗೊಳ್ಳುವ ಮೂಲಕ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರು ಅರಸಿಕೊಂಡು ಕಾಡುಕೋಣ ಆಗಮಿಸಿರಬೇಕೆಂದು ಸಂಶಯಿಸಲಾಗಿದೆ.


