ನವದೆಹಲಿ: 'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಡಿದ ಅವಮಾನವನ್ನು ಪಶ್ಚಿಮ ಬಂಗಾಳದ ಜನತೆ ಕ್ಷಮಿಸುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಡೀ ದೇಶವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ಗೌರವಾನ್ವಿತ ರಾಷ್ಟ್ರಪತಿ ಅವರಿಗೆ ಅವಮಾನ ಮಾಡಿರುವುದು 'ತೀವ್ರ ಕಳವಳಕಾರಿ ವಿಷಯ' ಎಂದು ದೆಹಲಿ ಮೆಟ್ರೊದ ಎರಡು ಹೊಸ ಕಾರಿಡಾರ್‌ಗಳನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
'ರಾಷ್ಟ್ರಪತಿಯವರು ಬುಡಕಟ್ಟು ಸಂಪ್ರದಾಯವನ್ನು ಗೌರವಿಸುವ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂಗಾಳಕ್ಕೆ ಭೇಟಿ ನೀಡಿದ್ದರು. ಆದರೆ ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ರಾಷ್ಟ್ರಪತಿ ಮತ್ತು ಬುಡಕಟ್ಟು ಸಮುದಾಯದವರಿಗೆ ಅವಮಾನ ಎಸಗಲಾಗಿದೆ. ಮಹಿಳೆಯರು, ಬಡುಕಟ್ಟಿನ ಜನರು ಹಾಗೂ ರಾಷ್ಟ್ರಪತಿಗಳನ್ನು ಅವಮಾನಿಸಿದ್ದಕ್ಕಾಗಿ ಟಿಎಂಸಿಯನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸುವುದಿಲ್ಲ' ಎಂದು ಪ್ರಧಾನಿ ಆರೋಪಿಸಿದ್ದಾರೆ.
'ಸ್ವತಃ ಬುಡಕಟ್ಟು ಹಿನ್ನೆಲೆಯಿಂದ ಬಂದಿರುವ ರಾಷ್ಟ್ರಪತಿ, ಸಂತಾಲ್ ಸಮುದಾಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ' ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.
ಬುಡಕಟ್ಟು ಸಂತಾಲ್ ಸಮುದಾಯದ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ರಾಷ್ಟ್ರಪತಿ ಭೇಟಿಯ ಸಮಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಚಿವರು ಗೈರು ಹಾಜರಾಗಿರುವುದು ವಿವಾದಕ್ಕೀಡಾಗಿತ್ತು. ಅಲ್ಲದೆ ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಮತ್ತೊಂದೆಡೆ ಪ್ರತಿಕ್ರಿಯಿಸಿದ್ದ ಮಮತಾ, 'ರಾಷ್ಟ್ರಪತಿ ಮುರ್ಮು ಅವರು ಬಿಜೆಪಿಯ ಸಲಹೆಯಂತೆ ಮಾತನಾಡುತ್ತಾರೆ' ಎಂದು ಆರೋಪಿಸಿದ್ದರು. 'ಮಣಿಪುರ ಮತ್ತು ಛತ್ತೀಸಗಢದ ಬುಡಕಟ್ಟು ಜನರ ಮೇಲಿನ ದೌರ್ಜನ್ಯದ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ' ಎಂದು ಪ್ರಶ್ನಿಸಿದ್ದರು.

