ನವದೆಹಲಿ: 'ಜನರ ಗಮನವನ್ನು ಬೇರೆಡೆ ಸೆಳೆಯಲು ಹೊಸ ಕಾರ್ಯಸೂಚಿಗಳನ್ನು ರೂಪಿಸುವುದು ಬಿಟ್ಟರೆ ಪದವೀಧರರ ನಿರುದ್ಯೋಗದಂಥ ದೊಡ್ಡ ಬಿಕ್ಕಟ್ಟನ್ನು ಪರಿಹರಿಸುವ ಯಾವ ಪರಿಹಾರವೂ ಪ್ರಧಾನಿ ಮೋದಿ ಅವರ ಬಳಿ ಇಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಕಿಡಿಕಾರಿದ್ದಾರೆ.
ಭಾರತದಲ್ಲಿ ಪದವೀಧರರ ನಿರುದ್ಯೋಗ ಕುರಿತಂತೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿರುವ ವರದಿಯನ್ನು ಆಧರಿಸಿ ಜೈರಾಮ್ ರಮೇಶ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿರುವ 20ರಿಂದ 29 ವಯಸ್ಸಿನ 6.30 ಕೋಟಿ ಪದವೀಧರರಲ್ಲಿ 1.10 ಕೋಟಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್, ' ಈ ಸರ್ಕಾರವು ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವಲ್ಲಿ ಮಾತ್ರ ಪಳಗಿದೆ. ಯುವಜನರು ಉದ್ಯೋಗಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಉದ್ಯೋಗವೇ ಇಲ್ಲ' ಎಂದಿದ್ದಾರೆ.
'ಯುವಜನರು ಮಾಡುವ ರೀಲ್ಸ್ ತಮ್ಮ ಸರ್ಕಾರದ ಪ್ರಮುಖ ಸಾಧನೆ ಎಂದು ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಅವರ ಬಳಿ ಬೇರೆ ಯಾವ ಆಯ್ಕೆಯೂ ಇಲ್ಲ. ಪದವೀಧರರ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಇದ್ದು, ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಉದ್ಯೋಗದ ಬಗ್ಗೆ ಮಾತನಾಡುವ ಧೈರ್ಯವೂ ಮೋದಿ ಅವರಿಗೆ ಇಲ್ಲದಾಗಿದೆ' ಎಂದೂ ಟೀಕಿಸಿದ್ದಾರೆ.

