ಭಾರತೀಯ ವಿಮಾನಯಾನ ಸಂಸ್ಥೆಗಳು ಕೂಡಾ, ವಾಯುಪ್ರದೇಶ ಮುಕ್ತವಾಗಿರುವ ಒಮಾನ್ ಹಾಗೂ ಸೌದಿ ಅರೇಬಿಯಾದಂಥ ದೇಶಗಳಿಗೆ ಕಾರ್ಯಾಚರಣೆ ಆರಂಭಿಸುವಂತೆ ವಿಮಾನಯಾನಗಳ ಮಹಾನಿರ್ದೇಶನಾಲಯ ಸೂಚನೆ ನೀಡಿದೆ. ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಯ ಸೇವೆಗಳು ಮಂಗಳವಾರ ಆರಂಭವಾಗಲಿವೆ. ಭಾರತೀಯರು ಅಪಾರ ಸಂಖ್ಯೆಯಲ್ಲಿ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಕಾಯಂ ಹಾಗೂ ಚಾರ್ಟರ್ಡ್ ವಿಮಾನಗಳಿಗೆ ಭಾರಿ ಬೇಡಿಕೆ ಇದೆ. ಇಂಡಿಗೊ ಸಂಸ್ಥೆ ಜಿದ್ದಾದಿಂದ ಮಂಗಳವಾರ 10 ವಿಶೇಷ ವಿಮಾನಗಳನ್ನು ಹಾರಿಸಲು ನಿರ್ಧರಿಸಿದ್ದು, ಅತಂತ್ರ ಭಾರತೀಯ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಲು ಅವಕಾಶ ಕಲ್ಪಿಸಿದ್ದಾಗಿ ಸರ್ಕಾರ ಹೇಳಿಕೆ ನೀಡಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳವಾರದಿಂದ ಮಸ್ಕತ್-ದೆಹಲಿ, ಕೊಚ್ಚಿನ್, ಕೋಝಿಕ್ಕೋಡ್, ಮಂಗಳೂರು, ಮುಂಬೈ ಹಾಗೂ ತಿರುಚಿನಾಪಳ್ಳಿಗೆ ವಿಮಾನಯಾನ ಸೇವೆ ಆರಂಭಿಸಲಿದೆ. ಏರ್ ಇಂಡಿಯಾ ಈಗಾಗಲೇ ಅಮೆರಿಕ, ಕೆನಡಾ ಮತ್ತು ಬ್ರಿಟನ್ ವಿಮಾನಗಳ ಸೇವೆಯನ್ನು ಆರಂಭಿಸಿದೆ.
ಮೊದಲು ಟಿಕೆಟ್ ಕಾಯ್ದಿರಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಎಮಿರೇಟ್ಸ್ ಸಂಸ್ಥೆ ಹೇಳಿದೆ. ಈ ಸೀಮಿತ ವಿಮಾನಗಳಲ್ಲಿ ವಾಪಸ್ಸಾಗಲು ಮರು ಟಿಕೆಟ್ ಕಾಯ್ದಿರಿಸಿದವರು ನೇರವಾಗಿ ಎಮಿರೇಟ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿನೀಡಿದೆ. ಮಂಗಳವಾರ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ಗೆ ತಲಾ ಒಂದೊಂದು ವಿಮಾನಗಳು ಹಾರಾಟ ನಡೆಸಿವೆ ಎಂದು ಸ್ಪಷ್ಟಪಡಿಸಿದೆ.
ಇತ್ತಿಹಾದ್ ವಿಮಾನಯಾನ ಸಂಸ್ಥೆಯ 15 ಪ್ರಯಾಣಿಕ ವಿಮಾನಗಳು ಟೇಕಾಫ್ ಆಗಿದ್ದು, ದೆಹಲಿ, ಮುಂಬೈ, ಬೆಂಗಳೂರು ಹಾಗೂ ಕೊಚ್ಚಿನ್ ಗೆ ಆಗಮಿಸುತ್ತಿವೆ. ಅಬುಧಾಬಿಯಿಂದ ಮೂರು ಗಂಟೆಗಳ ಗವಾಕ್ಷಿಯಡಿ ವಿಮಾನಯಾನ ಸೇವೆ ಆಂಶಿಕವಾಗಿ ಪುನರಾರಂಭವಾಗಿವೆ.

