HEALTH TIPS

ಹಿಂದೂ ರುದ್ರಭೂಮಿಯಿಂದ ಮುಸ್ಲಿಂ ವ್ಯಕ್ತಿಯ ಮೃತದೇಹ ಹೊರತೆಗೆಯಲು ಬಾಂಬೆ ಹೈಕೋರ್ಟ್ ಆದೇಶ

ಮುಂಬೈ: ಸಾಂವಿಧಾನಿಕ ರಕ್ಷಣೆಗಳು ಸಾವಿನೊಂದಿಗೆ ಕೊನೆಗೊಳ್ಳುವುದಿಲ್ಲ ಎನ್ನುವುದನ್ನು ಪುಷ್ಟೀಕರಿಸುವ ಮಹತ್ವದ ತೀರ್ಪೊಂದನ್ನು ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ನೀಡಿದೆ. ಸಂವಿಧಾನದ ವಿಧಿ 21ರಡಿ ವ್ಯಕ್ತಿಯ ಸಾವಿನ ನಂತರವೂ ಘನತೆಯ ಹಕ್ಕು ಅಬಾಧಿತವಾಗಿರುತ್ತದೆ ಎಂದು ಅದು ಎತ್ತಿ ಹಿಡಿದಿದೆ.

ಆಡಳಿತಾತ್ಮಕ ನಿರಾಕರಣೆಗಳನ್ನು ತಳ್ಳಿ ಹಾಕಿದ ಪೀಠವು, ಮುಸ್ಲಿಂ ವ್ಯಕ್ತಿಯೋರ್ವರ ಅಂತಿಮ ವಿಧಿವಿಧಾನಗಳನ್ನು ಅವರ ಧರ್ಮಕ್ಕೆ ಅನುಗುಣವಾಗಿ ನಡೆಸುವಂತಾಗಲು ಹಿಂದು ರುದ್ರಭೂಮಿಯಿಂದ ಅವರ ಮೃತದೇಹವನ್ನು ಹೊರತೆಗೆಯಲು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿದೆ.

ಮೃತದೇಹವನ್ನು ಹೊರಕ್ಕೆ ತೆಗೆಯಲು ಅನುಮತಿಯನ್ನು ನಿರಾಕರಿಸಿದ್ದ ನಾಗ್ಪುರ ಗ್ರಾಮೀಣ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಆದೇಶಗಳನ್ನು ರದ್ದುಗೊಳಿಸಿದ ವಿಭಾಗೀಯ ಪೀಠವು, ಸಕ್ಷಮ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

ನಿರಾಕರಣೆಯು ಅಸ್ಪಷ್ಟವಾಗಿದೆ ಮತ್ತು ಕಾರಣರಹಿತವಾಗಿದೆ ಎಂದು ಬೆಟ್ಟು ಮಾಡಿದ ಪೀಠವು, ಈ ಸಂದರ್ಭದಲ್ಲಿ ಮೃತದೇಹವನ್ನು ವಾರಸುದಾರರ ವಶಕ್ಕೆ ನೀಡಲು ನಿರಾಕರಿಸುವುದು ಸಂವಿಧಾನದ 14,21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಎತ್ತಿ ಹಿಡಿಯಿತು.

ಪ್ರಕರಣದ ಹಿನ್ನೆಲೆ

ವಿಧಿ 226ರಡಿ ಸಲ್ಲಿಸಲಾದ ರಿಟ್ ಅರ್ಜಿಯು ಸಾಜಿದ್ ಖಾನ್ ಮುನವ್ವರ್ ಖಾನ್ ಅವರ ಮೃತದೇಹವನ್ನು ಹೊರಕ್ಕೆ ತೆಗೆಯಲು ಅನುಮತಿ ನಿರಾಕರಿಸಿದ್ದ ಕಂದಾಯ ಅಧಿಕಾರಿಗಳ 2026,ಫೆ.14 ಮತ್ತು ಫೆ.18ರ ಆದೇಶಗಳನ್ನು ಪ್ರಶ್ನಿಸಿತ್ತು.

ಅರ್ಜಿಯ ಪ್ರಕಾರ ಖಾನ್ ಅವರು ಜ.25ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ತಾಜುದ್ದೀನ್ ಬಾಬಾ ಅವರ ಉರೂಸ್‌ನಲ್ಲಿ ಪಾಲ್ಗೊಳ್ಳಲು ನಾಗ್ಪುರಕ್ಕೆ ಪ್ರಯಾಣಿಸಿದ್ದರು. ಜ.26ರಂದು ಅವರು ನಾಪತ್ತೆಯಾಗಿದ್ದರು. ಆರಂಭಿಕ ವಿಚಾರಣೆಗಳು ಫಲ ನೀಡದ್ದರಿಂದ ಜ.31ರಂದು ನಾಪತ್ತೆ ದೂರನ್ನು ದಾಖಲಿಸಲಾಗಿತ್ತು.

ಜ.28ರಂದು ನಾಗ್ಪುರ ಗ್ರಾಮೀಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗಿತ್ತು. ಮೃತದೇಹದ ಫೋಟೊಗಳನ್ನು ನೋಡಿದ ಬಳಿಕ ಅರ್ಜಿದಾರರು ಅದು ತನ್ನ ಸಹೋದರ ಖಾನ್ ಅವರದ್ದು ಎಂದು ಗುರುತಿಸಿದ್ದರು. ಮೃತದೇಹವನ್ನು ಅಪರಿಚಿತ ಎಂದು ಪೋಲಿಸರು ಪರಿಗಣಿಸಿದ್ದರಿಂದ ಅದನ್ನು ನಾಗ್ಪುರದ ಇಮಾಮ್‌ವಾಡಾದಲ್ಲಿಯ ಮೋಕ್ಷಧಾಮ ಘಾಟ್‌ನಲ್ಲಿ ಹೂಳಲಾಗಿತ್ತು.

ಮುಸ್ಲಿಂ ಧಾರ್ಮಿಕ ಪದ್ಧತಿಗಳಿಗೆ ಅನುಗುಣವಾಗಿ ಬಡಾ ತಾಜ್‌ಬಾಗ್‌ನಲ್ಲಿಯ ಖಬರಿಸ್ತಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸುವಂತಾಗಲು ಮೃತದೇಹವನ್ನು ಹೊರತೆಗೆಯುವಂತೆ ಅರ್ಜಿದಾರರು ಕೋರಿದ್ದರು. ಅವರ ಮನವಿಯನ್ನು ನಿರಾಕರಿಸಿದ್ದ ಅಧಿಕಾರಿಗಳು ಸಕ್ಷಮ ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದ್ದರು. ಹೀಗಾಗಿ ಅರ್ಜಿದಾರರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ತೀರ್ಪು ಏಕೆ ಮುಖ್ಯ?

ಮೃತರಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆ ಮುಖ್ಯವಾಗಿ ಉಳಿಯುತ್ತದೆ ಎಂದು ತೀರ್ಪು ಒತ್ತಿ ಹೇಳಿದೆ. ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಮೃತದೇಹವನ್ನು ಹೊರತೆಗೆಯಲು ಆದೇಶಿಸುವ ಮೂಲಕ ನ್ಯಾಯಾಲಯವು ಸರಕಾರವು ಮಾನವ ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು ಎನ್ನುವದನ್ನು ಪುನರುಚ್ಚರಿಸಿದೆ.

ಮೂಲಭೂತ ಹಕ್ಕುಗಳು ಅಪಾಯದಲ್ಲಿದ್ದಾಗ ಕಾರ್ಯವಿಧಾನದ ಔಪಚಾರಿಕತೆ ಮತ್ತು ಕಾರಣವಿಲ್ಲದೆ ನಿರಾಕರಣೆಗಳು ಸಾಂವಿಧಾನಿಕ ಖಾತರಿಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ತೀರ್ಪು ಆಡಳಿತಾತ್ಮಕ ಅಧಿಕಾರಿಗಳಿಗೆ ರವಾನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries