HEALTH TIPS

ಹಾರ್ಮುಜ್ ಜಲಸಂಧಿ ಉದ್ವಿಗ್ನತೆ: ತೈಲ ಬೆಲೆ ಜಿಗಿತ, ಜಾಗತಿಕ ಪೂರೈಕೆ ಸರಪಳಿಗೆ ಆಘಾತ

ನವದೆಹಲಿ: ಇರಾನ್ ಜೊತೆಗಿನ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ವಿಶ್ವದ ಪ್ರಮುಖ ಇಂಧನ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ.

ಜಲಸಂಧಿ ಸ್ಥಗಿತಗೊಳ್ಳುವ ಭೀತಿಯಿಂದ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿವೆ.

ಜಾಗತಿಕವಾಗಿ ಬಳಕೆಯಾಗುವ ತೈಲದ ಸುಮಾರು ಐದನೇ ಒಂದು ಭಾಗ ಹಾಗೂ ಹೆಚ್ಚಿನ ಪ್ರಮಾಣದ ನೈಸರ್ಗಿಕ ಅನಿಲವು ಹಾರ್ಮುಜ್ ಜಲಮಾರ್ಗದ ಮೂಲಕವೇ ಸಾಗುತ್ತದೆ. ಈ ಪ್ರದೇಶದಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನಿನ ದಾಳಿಗಳು ನಡೆದ ಬಳಿಕ ಸಾಗಣೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ.

ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಸೋಮವಾರ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿ, ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗಿನ ಮೇಲೆ ತೀವ್ರ ದಾಳಿ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಂದರೆ ಟ್ಯಾಂಕರ್ ಗೆ ಬೆಂಕಿ ಹಚ್ಚುವ ಆಕ್ರಮಣಕಾರಿ ಕರೆ ನೀಡಲಾಗಿದೆ.

ಇದುವರೆಗೆ ಕನಿಷ್ಠ ಐದು ಟ್ಯಾಂಕರ್‌ಗಳು ಹಾನಿಗೊಳಗಾಗಿದ್ದು, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸುಮಾರು 150 ಹಡಗುಗಳು ಇರಾನ್ ಮತ್ತು ಒಮಾನ್ ಅನ್ನು ಬೇರ್ಪಡಿಸುವ ಜಲಸಂಧಿ ಸುತ್ತಲೂ ಸಿಲುಕಿಕೊಂಡಿವೆ.

ಶನಿವಾರ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆದ ಬಳಿಕ ಉದ್ವಿಗ್ನತೆ ಮತ್ತಷ್ಟು ಗಟ್ಟಿಯಾಗಿದೆ. ಶುಕ್ರವಾರ ಬ್ಯಾರೆಲ್‌ಗೆ 73 ಡಾಲರ್ ತಲುಪಿದ್ದ ಕಚ್ಚಾ ತೈಲದ ಬೆಲೆ ಸೋಮವಾರ 79.40 ಡಾಲರ್‌ಗಿಂತ ಮೇಲಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ.

ವಿಂಡ್‌ವರ್ಡ್‌ನ ಹಿರಿಯ ಕಡಲ ಗುಪ್ತಚರ ವಿಶ್ಲೇಷಕಿ ಮಿಷೆಲ್ ಬಾಕ್‌ಮನ್ ಪ್ರಕಾರ, "ಸಂಚಾರ ಕನಿಷ್ಠ ಶೇ.80ರಷ್ಟು ಕುಸಿದಿದೆ. ಮಧ್ಯಪ್ರಾಚ್ಯ ಮತ್ತು ಕೊಲ್ಲಿಯಿಂದ ಹೊರಹೋಗುವ ಮಾರ್ಗಗಳಲ್ಲಿ ಸರಕು ಸಾಗಣೆ ವೆಚ್ಚದಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ", ಎಂದು ಅವರು ತಿಳಿಸಿದ್ದಾರೆ.

ಕಂಟ್ರೋಲ್ ರಿಸ್ಕ್‌ನ ಕಡಲ ಗುಪ್ತಚರ ಮತ್ತು ಭದ್ರತಾ ಸೇವೆಗಳ ನಿರ್ದೇಶಕ ಕಾರ್ಮ್ಯಾಕ್ ಮೆಕ್‌ಗ್ಯಾರಿ ಅವರು, ಶನಿವಾರ ಅಂತರರಾಷ್ಟ್ರೀಯ ಸಾಗಾಟಕ್ಕೆ ಅಡಚಣೆ ಮರುಕಳಿಸುವ ಮೂಲಕ ಇರಾನ್ ಜಲಸಂಧಿಯನ್ನು ಮುಚ್ಚಿರುವ ಸಂದೇಶವನ್ನು ನೌಕಾಪಡೆಯವರು ಸ್ವೀಕರಿಸಿದ್ದಾಗಿ ಹೇಳಿದ್ದಾರೆ. "ಆ ಸಂದೇಶವನ್ನು ಈ ಪ್ರದೇಶದ ಪ್ರತಿಯೊಂದು ಹಡಗು ಕೇಳುತ್ತಿತ್ತು. ಹೆಚ್ಚಿನ ಹಡಗುಗಳು ತಮ್ಮ ಸಂಚಾರವನ್ನು ವಿರಾಮಗೊಳಿಸಲು ಅದು ಸಾಕಾಯಿತು" ಎಂದರು.

ಹಡಗು ಟ್ರ್ಯಾಕಿಂಗ್ ಸೇವೆ ಕೆಪ್ಲರ್ ಮಾಹಿತಿ ಪ್ರಕಾರ, ರವಿವಾರ ಜಲಸಂಧಿಯಲ್ಲಿ ಸೀಮಿತ ಸಂಚಾರ ಮುಂದುವರಿದಿದ್ದು, ಮುಖ್ಯವಾಗಿ ಇರಾನ್ ಹಾಗೂ ಅದರ ಪ್ರಮುಖ ವ್ಯಾಪಾರ ಪಾಲುದಾರ ಚೀನಾದ ಧ್ವಜವನ್ನು ಹೊತ್ತಿರುವ ಹಡಗುಗಳೇ ಸಂಚರಿಸುತ್ತಿದ್ದವು.

ಹಡಗಿನ ಇರುವಿಕೆ ಪತ್ತೆಯಾಗುವುದನ್ನು ತಪ್ಪಿಸಲು ಕೆಲವು ಹಡಗುಗಳು ತಮ್ಮ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಅನ್ನು ಸ್ಥಗಿತಗೊಳಿಸಿದ್ದ ಸಾಧ್ಯತೆಯಿದೆ ಎಂದು ಬಾಕ್‌ಮನ್ ತಿಳಿಸಿದ್ದಾರೆ.

ಇರಾನ್ ಸಂಪೂರ್ಣವಾಗಿ ಜಲಸಂಧಿಯನ್ನು ಸ್ಥಗಿತಗೊಳಿಸಿದರೆ ಅದು "ತನ್ನ ಕುತ್ತಿಗೆಯ ಸುತ್ತ ಕಣಿಕೆಯನ್ನು ಬಿಗಿಗೊಳಿಸುವಂತಾಗಿದೆ" ಎಂದು ಮೆಕ್‌ಗ್ಯಾರಿ ಅಭಿಪ್ರಾಯಪಟ್ಟಿದ್ದಾರೆ. "ಹಡಗು ಸಾಗಣೆಯ ಮೇಲೆ ದಾಳಿ ಮುಂದುವರೆದರೆ ಗಲ್ಫ್ ರಾಷ್ಟ್ರಗಳು ಯುದ್ಧಕ್ಕೆ ಸೇರುವ ಸಾಧ್ಯತೆ ಇದೆ. ಅದು ಇರಾನ್‌ಗೆ ದೊಡ್ಡ ಹೆಜ್ಜೆಯಾಗಬಹುದು" ಎಂದರು.

ಪರಿಸ್ಥಿತಿ ಹೀಗಿದ್ದರೂ ಜಲಸಂಧಿಯನ್ನು ದೀರ್ಘಕಾಲ ಸಂಪೂರ್ಣ ಮುಚ್ಚಿಡುವ ಸಾಧ್ಯತೆ ಅಸಾಧ್ಯವೆಂದು ಅವರು ಹೇಳಿದ್ದಾರೆ. ಆದರೆ ಪ್ರಾದೇಶಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಕೆಪ್ಲರ್ ಪ್ರಕಾರ, ಪ್ರಮುಖ ತೈಲ ಕಂಪನಿಗಳು, ವಾಣಿಜ್ಯ ನಿರ್ವಾಹಕರು ಹಾಗೂ ವಿಮಾ ಕಂಪನಿಗಳು ಈ ಕಾರಿಡಾರ್‌ನಿಂದ ಪರಿಣಾಮಕಾರಿಯಾಗಿ ಹಿಂದೆ ಸರಿದಿವೆ. ಯುದ್ಧಕ್ಕೂ ಮುನ್ನವೇ ವಿಮಾ ಕಂತುಗಳು ಆರು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದವು.

ಗಲ್ಫ್ ಮತ್ತು ಕತಾರ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ಒತ್ತಡದಿಂದ ಎಲ್‌ಎನ್‌ಜಿ ಉತ್ಪಾದನೆ ಪೂರ್ವಭಾವಿಯಾಗಿ ಸ್ಥಗಿತಗೊಂಡಿದೆ ಎಂದು ಸೆಂಟರ್ ಫಾರ್ ಎ ನ್ಯೂ ಅಮೇರಿಕನ್ ಸೆಕ್ಯುರಿಟಿಯ ಹಿರಿಯ ಸಹಾಯಕ ರಾಚೆಲ್ ಝೀಂಬಾ ತಿಳಿಸಿದ್ದಾರೆ. "ಟ್ಯಾಂಕರ್‌ಗಳು ಕೊಲ್ಲಿಗೆ ಬರಲು ಹಿಂಜರಿಯುತ್ತಿರುವುದು ಅಪಾಯದ ಸ್ಪಷ್ಟ ಸೂಚನೆ" ಎಂದರು.

ಅಮೆರಿಕಕ್ಕೂ ಪರಿಣಾಮ

ಅಮೆರಿಕ-ಇಸ್ರೇಲಿ ದಾಳಿಗಳ ನಿರೀಕ್ಷೆಯಲ್ಲಿ ಫೆಬ್ರವರಿಯಲ್ಲಿ ಇರಾನ್ ತನ್ನ ತೈಲ ರಫ್ತನ್ನು ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿತ್ತು ಎಂದು ಕೆಪ್ಲರ್ ತಿಳಿಸಿದೆ. ಗಲ್ಫ್ ರಾಷ್ಟ್ರಗಳೂ ಮುಂಚಿತವಾಗಿ ಸರಬರಾಜುಗಳನ್ನು ಲೋಡ್ ಮಾಡಿದ್ದವು. ಇದರಿಂದ ಅಲ್ಪಾವಧಿಯಲ್ಲಿ ಪೂರೈಕೆ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗಿತ್ತು ಎಂದು ಝೀಂಬಾ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಕಚ್ಚಾ ತೈಲದ ಸುಮಾರು 70 ಶೇಕಡಾ ಏಷ್ಯಾಕ್ಕೆ ಸಾಗುತ್ತದೆ. ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರಮುಖ ಖರೀದಿದಾರರು ಎಂದು ಯುಎಸ್ ಇಂಧನ ಮಾಹಿತಿ ಆಡಳಿತ ಹೇಳಿದೆ.

ಕಚ್ಚಾ ತೈಲದ ಹೊರತಾಗಿ ಜೆಟ್ ಇಂಧನ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಕೆಯೂ ಒತ್ತಡ ಎದುರಿಸುತ್ತಿದೆ. ಯುರೋಪ್‌ನ ಜೆಟ್ ಇಂಧನ ಪೂರೈಕೆಯ ಸುಮಾರು 30 ಶೇಕಡಾ ಈ ಜಲಸಂಧಿಯಿಂದ ಪ್ರಾರಂಭವಾಗುತ್ತದೆ ಅಥವಾ ಅದರ ಮೂಲಕ ಸಾಗುತ್ತದೆ. ಜಾಗತಿಕ ಎಲ್‌ಎನ್‌ಜಿ ಪೂರೈಕೆಯ ಐದನೇ ಒಂದು ಭಾಗವೂ ಇದೇ ಮಾರ್ಗದ ಮೇಲೆ ಅವಲಂಬಿತವಾಗಿದೆ.

ಅಮೆರಿಕ ಈಗ ಮಧ್ಯಪ್ರಾಚ್ಯ ತೈಲದ ಮೇಲೆ ಹಿಂದಿನಷ್ಟು ಅವಲಂಬಿತವಾಗಿಲ್ಲದಿದ್ದರೂ, ಪರಿಣಾಮದಿಂದ ಸಂಪೂರ್ಣ ಮುಕ್ತವಾಗಿಲ್ಲ. ಪಂಪ್ ಗಳಲ್ಲಿ ಬೆಲೆಗಳ ಪರಿಣಾಮ ಕಾಣಲು ಕೆಲವು ವಾರಗಳು ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಸರಬರಾಜು ಸರಪಳಿ ತಜ್ಞ ಡೇವಿಡ್ ವಾರಿಕ್ ಪ್ರಕಾರ, ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ. ಕಂಪೆನಿಗಳು ತಮ್ಮ ಹಡಗುಗಳನ್ನು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ತಿರುಗಿಸುತ್ತಿದ್ದು, ಇದರಿಂದ ವಿತರಣಾ ಸಮಯ ಹೆಚ್ಚಳ ಮತ್ತು ಹೆಚ್ಚುವರಿ ವೆಚ್ಚಗಳು ಎದುರಾಗುತ್ತಿವೆ.

"ಯುದ್ಧ ಅಪಾಯ ವಿಮೆ ಮತ್ತು ತುರ್ತು ವಿಮೆ ಸೇರಿ ಸಾವಿರಾರು ಡಾಲರ್ ಹೆಚ್ಚುವರಿ ವೆಚ್ಚವಾಗುತ್ತಿದೆ. ಕಚ್ಚಾ ವಸ್ತು ಸಂಗ್ರಹ ಹಾಗೂ ರಜಾ ಕಾಲದ ಯೋಜನೆಗಳಿಗೆ ಇದು ಪ್ರಮುಖ ಸಮಯ. ಇಂತಹ ಅಡಚಣೆ ಪೂರೈಕೆ ಸರಪಳಿಗೆ ದೊಡ್ಡ ಹೊರೆ ಆಗುತ್ತದೆ" ಎಂದು ಅವರು ಹೇಳಿದ್ದಾರೆ.

ಇಂಧನದ ನಿವ್ವಳ ಉತ್ಪಾದಕರಾಗಿರುವ ಅಮೆರಿಕದ ತೈಲ ಉತ್ಪಾದಕರಿಗೆ ಬೆಲೆ ಏರಿಕೆ ಲಾಭದಾಯಕವಾಗಬಹುದು ಎಂದು ಝೀಂಬಾ ಅಭಿಪ್ರಾಯಪಟ್ಟಿದ್ದಾರೆ. "ಗ್ರಾಹಕರು ನಷ್ಟ ಅನುಭವಿಸಬಹುದು, ಆದರೆ ಉತ್ಪಾದಕರು ಲಾಭ ಪಡೆಯುತ್ತಾರೆ. ಆದರೆ ಈ ಪರಿಸ್ಥಿತಿ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ಪ್ರಮುಖ ಪ್ರಶ್ನೆ" ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries