ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಸಿಕ ಅಧ್ಯಕ್ಷತೆಗಾಗಿ ಅಮೆರಿಕ ರೂಪಿಸಿದ ಕಾರ್ಯಸೂಚಿ ಸೋಮವಾರ ಅಂಗೀಕಾರವಾಗಲಿಲ್ಲ. ಇರಾನ್ ಮೇಲಿನ ಅಮೆರಿಕ ನಡೆ ಕುರಿತು ಚೀನಾ ಮತ್ತು ರಷ್ಯಾ ಆಕ್ಷೇಪಿಸಿ ತೀವ್ರ ಕಳವಳ ವ್ಯಕ್ತಪಡಿಸಿದವು.
ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಈ ಎರಡೂ ಕಾಯಂ ಸದಸ್ಯ ದೇಶಗಳ ವಿರೋಧದಿಂದ ಅಮೆರಿಕದ ಕಾರ್ಯಸೂಚಿ ಅಂಗೀಕಾರ ಪಡೆಯುವಲ್ಲಿ ವಿಫಲವಾಯಿತು.
15 ಸದಸ್ಯ ರಾಷ್ಟ್ರಗಳ ಭದ್ರತಾ ಮಂಡಳಿಯ ಮಾರ್ಚ್ ತಿಂಗಳ ಅಧ್ಯಕ್ಷತೆಯನ್ನು ಅಮೆರಿಕ ವಹಿಸಿಕೊಂಡಿದೆ. ಮಂಡಳಿಯ ನಿರೀಕ್ಷಿತ ಸಭೆಗಳು, ತಿಂಗಳ ಕಾರ್ಯಕ್ರಮಗಳನ್ನು ವಿವರಿಸುವ ಮಾಸಿಕ ಕಾರ್ಯಸೂಚಿಗೆ ವಾಡಿಕೆಯಂತೆ ತಿಂಗಳ ಆರಂಭದಲ್ಲಿಯೇ ಅಂಗೀಕಾರ ದೊರೆಯುತ್ತದೆ. ಆದರೆ ರಷ್ಯಾ, ಚೀನಾ ಆಕ್ಷೇಪದಿಂದ ಅದು ಸಾಧ್ಯವಾಗಲಿಲ್ಲ.

