HEALTH TIPS

ಇರಾನ್‌: ಖಮೇನಿ ಅವರ ಸ್ಥಾನಕ್ಕೆ ಪುತ್ರ ಮೊಜ್ತಾಬಾ ಉತ್ತರಾಧಿಕಾರಿ?

ದುಬೈ: 'ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸ್ಥಾನಕ್ಕೆ ಅವರ ಪುತ್ರ ಮೊಜ್ತಾಬಾ ಖಮೇನಿ (57) ನೇಮಕಗೊಳ್ಳುವ ಸಾಧ್ಯತೆಗಳಿವೆ. ಸಂಭವನೀಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಮೊಜ್ತಾಬಾ ಹೆಸರು ಮುಂಚೂಣಿಯಲ್ಲಿದೆ' ಎಂದು ಮೂಲಗಳು ಹೇಳಿವೆ.

ಖಮೇನಿ ಉತ್ತರಾಧಿಕಾರಿಯಾಗಿ ಮೊಜ್ತಾಬಾ ಅವರ ಹೆಸರು ಬಹುಕಾಲದಿಂದ ಕೇಳಿಬರುತ್ತಿದೆ. ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ ಕೋರ್ (ಐಆರ್‌ಜಿಸಿ) ಜತೆಗೆ ನಿಕಟ ಸಂಬಂಧ ಹೊಂದಿರುವ, ಮಧ್ಯಮ ಶ್ರೇಣಿಯ ಧರ್ಮಗುರುವಾಗಿರುವ ಮೊಜ್ತಾಬಾ ಖಮೇನಿ, ಇರಾನಿನ ಇಸ್ಲಾಮಿಕ್ ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ರಾಜಕೀಯ ಕೌಶಲ, ಸಾಟಿಯಿಲ್ಲದ ಧಾರ್ಮಿಕ ಮೈತ್ರಿ ಮತ್ತು ಅಪಾರ ಸಂಪತ್ತಿನ ಮೂಲಕ ದೇಶದಲ್ಲಿ ತನ್ನದೇ ಆದ ಅಧಿಕಾರ ಬಲವನ್ನು ಮೊಜ್ತಾಬಾ ಹೊಂದಿದ್ದಾರೆ.

ಇತ್ತೀಚೆಗೆ ಅಮೆರಿಕ- ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಬದುಕುಳಿದಿದ್ದರು. ಅವರ ಪತ್ನಿ ಜಹ್ರಾ ಹದ್ದಾದ್ ಅಡೆಲ್ ಮೃತಪಟ್ಟಿದ್ದರು. 'ಮೊಜ್ತಾಬಾ ಜೀವಂತವಾಗಿದ್ದಾರೆ, ಖಮೇನಿ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆದಾಗ ಮೊಜ್ತಾಬಾ ಟೆಹರಾನ್‌ನಲ್ಲಿ ಇರಲಿಲ್ಲ' ಎಂದು ಮೂಲಗಳು ಹೇಳಿವೆ.

ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಟಿವಿ ಆಯತೊಲ್ಲಾ ಅಲಿ ಖಮೇನಿ (86) ಮೃತಪಟ್ಟಿರುವುದನ್ನು ಮಾರ್ಚ್‌ 1ರಂದು ಖಚಿತಪಡಿಸಿತ್ತು. ಆದರೆ, ಮೊಜ್ತಾಬಾ ಎಲ್ಲಿದ್ದಾರೆ ಎನ್ನುವುದನ್ನು ಇದುವರೆಗೆ ಬಹಿರಂಗಪಡಿಸಿಲ್ಲ.

ಮುಂದುವರಿದ ದಾಳಿ

ಇರಾನ್‌ ರಾಜಧಾನಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಮತ್ತು ಅಮೆರಿಕದ ಪಡೆಗಳು ಬುಧವಾರ (ಯುದ್ಧದ ಐದನೆಯ ದಿನ) ಭಾರಿ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿದವು. ಇರಾನ್‌ನ ಭದ್ರತಾ ಪಡೆ, ಅಲ್ಲಿನ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು ಎಂದು ಇಸ್ರೇಲ್‌ ಹೇಳಿಕೊಂಡಿದೆ. 'ಇಸ್ರೇಲ್‌ ಮತ್ತು ಕೊಲ್ಲಿ ವಲಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ಮುಂದುವರಿದಿದೆ' ಎಂದು ಇರಾನ್‌ ಹೇಳಿದೆ.

'ಟೆಹರಾನ್‌ ಮೇಲೆ ಬುಧವಾರದಿಂದ ವ್ಯಾಪಕ ಪ್ರಮಾಣದಲ್ಲಿ ದಾಳಿಯನ್ನು ಆರಂಭಿಸಿದ್ದೇವೆ, ಕ್ಷಿಪಣಿ ಸಂಗ್ರಹ ಮತ್ತು ತಯಾರಿಕಾ ಘಟಕವನ್ನು ಹೊಡೆದುರುಳಿಸಿದ್ದೇವೆ' ಎಂದು ಇಸ್ರೇಲ್‌ ಸೇನೆ ಹೇಳಿದೆ. ಇದರ ಬೆನ್ನಲ್ಲೇ, ಟೆಹರಾನ್‌ನಲ್ಲಿ ಹಲವು ಸ್ಫೋಟಗಳು ವರದಿಯಾಗಿವೆ. ಕಟ್ಟಡಗಳ ನಡುವಿನಿಂದ ದಟ್ಟ ಹೊಗೆ ಮೇಲೇಳುತ್ತಿರುವ ದೃಶ್ಯ ಕಂಡುಬಂದಿದೆ.

'ಕೊಲ್ಲಿ ರಾಷ್ಟ್ರಗಳ ವಲಯದ ಸೇನಾ ಶಕ್ತಿ ಮತ್ತು ಆರ್ಥಿಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ' ಎಂದು ಇರಾನಿನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ಸ್‌ ಎಚ್ಚರಿಕೆ ನೀಡಿದೆ.

ಅಂತ್ಯಕ್ರಿಯೆ ಮುಂದೂಡಿಕೆ

ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಇರಾನ್‌ ಹೇಳಿದೆ.

ಸರ್ಕಾರಿ ಗೌರವದೊಂದಿಗೆ ಖಮೇನಿ ಅವರ ಅಂತ್ಯಕ್ರಿಯೆಯನ್ನು ಬುಧವಾರ ಸಂಜೆ, ಅವರ ಜನ್ಮಸ್ಥಳವಾದ, ಪವಿತ್ರ ನಗರಿ ಮಶಾದ್‌ನಲ್ಲಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

'ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇರುವುದರಿಂದ ಅಂತ್ಯಕ್ರಿಯೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು' ಎಂದು ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಟಿವಿ ವರದಿ ಮಾಡಿದೆ.

ಆಯತೊಲ್ಲಾ ಖಮೇನಿ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಮೂರು ದಿನ ನಡೆಯಲಿವೆ ಎಂದು ಇರಾನ್‌ ಹೇಳಿದೆ.

 **EDS: THIRD PARTY IMAGE** In this image released by @indiannavy on May 11 2025 Indian Navy

'ಯಾರೇ ಉತ್ತರಾಧಿಕಾರಿಯಾದರೂ ಹತ್ಯೆ ಮಾಡುತ್ತೇವೆ'

'ಇರಾನ್‌ನಲ್ಲಿ ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಯಾರೇ ನೇಮಕಗೊಂಡರೂ ಅವರನ್ನು ಹತ್ಯೆ ಮಾಡುತ್ತೇವೆ' ಎಂದು ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಜ್‌ ಎಚ್ಚರಿಕೆ ನೀಡಿದ್ದಾರೆ.

'ಇಸ್ರೇಲ್‌ನ ನಾಶಕ್ಕೆ ಯೋಜನೆ ರೂಪಿಸಿ ಅಮೆರಿಕ ಕೊಲ್ಲಿ ವಲಯಕ್ಕೆ ಬೆದರಿಕೆ ಹಾಕುತ್ತಿರುವ ಇರಾನ್‌ನ ಭಯೋತ್ಪಾದಕ ಆಡಳಿತವು ಅಲ್ಲಿನ ಪರಮೋಚ್ಚ ನಾಯಕನ ಹುದ್ದೆಗೆ ಯಾರನ್ನೇ ಆಯ್ಕೆ ಮಾಡಿದರೂ ನಮ್ಮ ಸೇನೆ ಅವರನ್ನು ಹತ್ಯೆ ಮಾಡಲಿದೆ. ಉತ್ತರಾಧಿಕಾರಿ ಹೆಸರು ಏನೇ ಇರಲಿ ಅವರು ಎಲ್ಲೇ ಅಡಗಿಕೊಂಡಿರಲಿ ಹತ್ಯೆ ಮಾಡಲಾಗುವುದು' ಎಂದು ಕಾಟ್ಜ್‌ 'ಎಕ್ಸ್‌' ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಮೆರಿಕದೊಂದಿಗೆ ಮಾತುಕತೆ ನಡೆಸಲ್ಲ: ಇರಾನ್‌

'ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಹೊಂದಿಲ್ಲ ಪಶ್ಚಿಮ ಏಷ್ಯಾ ಯುದ್ಧವನ್ನು ಎಲ್ಲಿಯವರೆಗೆ ಬೇಕಾದರೂ ಮುಂದುವರಿಸಬಹುದು' ಎಂದು ಆಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಮೊಹಮ್ಮದ್ ಮೊಖ್ಬರ್ ಹೇಳಿದ್ದಾರೆ. ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಟಿವಿಯೊಂದಿಗೆ ಮಾತನಾಡಿದ ಮೊಹಮ್ಮದ್‌ 'ಅಮೆರಿಕನ್ನರ ಮೇಲೆ ನಮಗೆ ನಂಬಿಕೆ ಇಲ್ಲ ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಕಾರಣ ಉಳಿದಿಲ್ಲ. ನಾವು ಎಲ್ಲಿಯವರೆಗೆ ಬೇಕಾದರೂ ಯುದ್ಧ ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.

ಪರಮೋಚ್ಚ ನಾಯಕನ ಆಯ್ಕೆ ಹೇಗೆ?

88 ಸದಸ್ಯ ಬಲದ ಧಾರ್ಮಿಕ ತಜ್ಞರ ಸಮಿತಿಯು ಇರಾನ್‌ನ ಮುಂದಿನ ಪರಮೋಚ್ಚ ನಾಯಕನನ್ನು ಆಯ್ಕೆ ಮಾಡಲಿದೆ. ಮೊಜ್ತಾಬಾ ಆಯ್ಕೆಯನ್ನು ಈ ಸಮಿತಿಯೇ ಅಂತಿಮಗೊಳಿಸಬೇಕಿದೆ. ಇರಾನ್‌ನ ಸೇನಾ ಆಡಳಿತವು ಪರಮೋಚ್ಚ ನಾಯಕನ ನಿಯಂತ್ರಣದಲ್ಲೇ ಇರುತ್ತದೆ.

ಈಗಿನ ಯುದ್ಧದ ಸಂದರ್ಭ ಮತ್ತು ಅಣ್ವಸ್ತ್ರ ಅಭಿವೃದ್ಧಿ- ಬಳಕೆಯಂಥ ಮಹತ್ವದ ವಿಚಾರಗಳನ್ನು ಆಧರಿಸಿ ಧಾರ್ಮಿಕ ತಜ್ಞರ ಸಮಿತಿಯು ಯಾರ ಹೆಸರನ್ನು ಅಂತಿಮಗೊಳಿಸಲಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇರಾನ್‌ನ ಮೊದಲ ಪರಮೋಚ್ಚ ನಾಯಕ ರೊಹೊಲ್ಲಾ ಖೊಮೇನಿ ಅವರ ಪುತ್ರ ಅಹಮ್ಮದ್‌ ಖೊಮೇನಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಆಯತೊಲ್ಲಾ ಅಲಿ ಖಮೇನಿ 37 ವರ್ಷ ಆಡಳಿತ ನಡೆಸಿದ್ದರು.

1045ಕ್ಕೂ ಹೆಚ್ಚು ಸಾವು

'ಇರಾನ್‌ ಮೇಲೆ ಇಸ್ರೇಲ್‌-ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ವೈಮಾನಿಕ ದಾಳಿಯಿಂದ ಬುಧವಾರದವರೆಗೆ ಕನಿಷ್ಠ 1045 ಜನರು ಮೃತಪಟ್ಟಿದ್ದಾರೆ. ಎಲ್ಲ ಮೃತದೇಹಗಳನ್ನು ಗುರುತಿಸಲಾಗಿದ್ದು ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ' ಎಂದು ಇರಾನ್‌ನ ಹುತಾತ್ಮರು ಮತ್ತು ಮಾಜಿ ಸೈನಿಕರ ವ್ಯವಹಾರಗಳ ಪ್ರತಿಷ್ಠಾನ ಹೇಳಿದೆ.

ಇರಾನ್‌ ನೌಕೆ ಮೇಲೆ ಅಮೆರಿಕ ದಾಳಿ: 87 ಶವ ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನ್‌ನ ನೌಕೆಯ ಮೇಲೆ ಅಮೆರಿಕ ದಾಳಿ ಮಾಡಿದ್ದು ಅದರಲ್ಲಿದ್ದ ಹಲವರು ಮೃತಪಟ್ಟಿದ್ದಾರೆ. ಈವರೆಗೆ 87 ಶವಗಳನ್ನು ಶ್ರೀಲಂಕಾ ನೌಕಾಪಡೆ ಪತ್ತೆಹಚ್ಚಿದೆ. 'ಐರೀಸ್‌ ಡೆನಾ' ಹೆಸರಿನ ನೌಕೆಯಲ್ಲಿದ್ದ 32 ಜನರನ್ನು ರಕ್ಷಿಸಲಾಗಿದೆ. ಆದರೆ ಹಲವರ ಸುಳಿವು ಸಿಕ್ಕಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಮೃತದೇಹಗಳು ಪತ್ತೆಯಾಗಿವೆ. ಸಾವಿಗೀಡಾದವರ ನಿಖರ ಸಂಖ್ಯೆ ತಿಳಿದಿಲ್ಲ ಎಂದು ನೌಕಾ ಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಏಳು ಜನರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊಗಳ ಮೂಲಕ ಇರಾನ್‌ ನೌಕೆ ಮೇಲೆ ದಾಳಿ ಮಾಡಿ ಮುಳುಗಿಸಿದೆ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ತಿಳಿಸಿದ್ದಾರೆ. '180 ಜನರಿದ್ದ ನೌಕೆಯು ಮುಳುಗುತ್ತಿರುವ ಬಗ್ಗೆ ನೌಕಾಪಡೆಗೆ ಮಾಹಿತಿ ಸಿಕ್ಕಿತ್ತು. ನಮ್ಮ ನೌಕೆಗಳು ಮತ್ತು ಯುದ್ಧ ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು' ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತ ಹೆರತ್ ಅವರು ತಿಳಿಸಿದ್ದಾರೆ. ಅವಘಡಕ್ಕೀಡಾದ ನೌಕೆಯು ಭಾರತದ ವಿಶಾಖಪಟ್ಟಣದಲ್ಲಿ ನಡೆದ ಸೇನಾ ಸಮರಾಭ್ಯಾಸದಿಂದ ವಾಪಸಾಗುತ್ತಿತ್ತು. ಶ್ರೀಲಂಕಾದ ಸೇನಾ ಪಡೆಯು ಸ್ಥಳಕ್ಕೆ ತೆರಳುವ ವೇಳೆಗಾಗಲೇ ನೌಕೆಯು ಸಂಪೂರ್ಣವಾಗಿ ಮುಳುಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries