ವಾಷಿಂಗ್ಟನ್ : ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರ ಒಳಗೊಂಡ ಚಿನ್ನದ ನಾಣ್ಯವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ.
ಅಮೆರಿಕದ ಹಣಕಾಸು ಸಚಿವ ಬ್ರ್ಯಾಂಡಾನ್ ಬೀಚ್ ಈ ಕುರಿತಂತೆ ಮಾಹಿತಿ ನೀಡಿದ್ದು, 'ದೇಶದ ಸದಾ ಕಾಲದ ಚೈತನ್ಯ ಮತ್ತು ಪ್ರಜಾಪ್ರಭುತ್ವವನ್ನು ಬಿಂಬಿಸುವಂಥ ನಾಣ್ಯವನ್ನು ತಯಾರಿಸಲು ಉದ್ದೇಶಿಸಿದ್ದೇವೆ.
ಅಂಥ ನಾಣ್ಯದ ಮೇಲೆ ಭಾವಚಿತ್ರ ಹೊಂದಲು ಅಧ್ಯಕ್ಷ ಟ್ರಂಪ್ ಅವರಿಗಿಂತಲೂ ಸೂಕ್ತವಾದ ವ್ಯಕ್ತಿ ಮತ್ತೊಬ್ಬರಿಲ್ಲ' ಎಂದಿದ್ದಾರೆ.
'ಮಾರ್ಚ್ 19ರಂದು ಕಲಾ ವಿಭಾಗದ ಸಭೆ ನಡೆಸಿ, ನಾಣ್ಯದ ವಿನ್ಯಾಸವನ್ನೂ ಅನುಮೋದಿಸಲಾಗಿದೆ. ಮೇಜಿನ ಮೇಲೆ ಟ್ರಂಪ್ ಒರಗಿ, ಮುಷ್ಠಿ ಬಿಗಿ ಹಿಡಿದಿರುವಂತೆ 24 ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಚಿತ್ರಿಸಲಾಗುತ್ತದೆ' ಎಂದೂ ಅವರು ತಿಳಿಸಿದ್ದಾರೆ.
ಆಕ್ಷೇಪ: ಅಮೆರಿಕದ ಫೆಡರಲ್ ಕಾನೂನಿನ ಪ್ರಕಾರ ದೇಶದ ಅಧ್ಯಕ್ಷರು ಜೀವಂತವಾಗಿರುವಾಗಲೇ ಅವರ ಭಾವಚಿತ್ರವನ್ನು ನೋಟುಗಳು, ನಾಣ್ಯಗಳ ಮೇಲೆ ಮುದ್ರಿಸುವಂತಿಲ್ಲ ಎಂಬ ನಿಯಮವಿದೆ. ಆದಾಗ್ಯೂ, ಟ್ರಂಪ್ ಆಡಳಿತ ನಾಣ್ಯ ಬಿಡುಗಡೆಗೆ ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.
ಟ್ರಂಪ್ ಥೀಮ್‌ನ ಚಿನ್ನದ ನಾಣ್ಯ ಬಿಡುಗಡೆ ವಿಚಾರವು ಮುಜುಗರದ ಸಂಗತಿಯಾಗಿದ್ದು, ಅಮೆರಿಕದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಡೆಮಾಕ್ರಟ್ ಪಕ್ಷದ ನಾಯಕರು ಆಕ್ಷೇಪಿಸಿದ್ದಾರೆ. ರಾಜರು ಮತ್ತು ಸರ್ವಾಧಿಕಾರಿಗಳಷ್ಟೇ ಈ ರೀತಿ ನಾಣ್ಯಗಳ ಮೇಲೆ ಚಿತ್ರ ಹೊಂದುತ್ತಿದ್ದರು. ಇದು ಪ್ರಜಾಪ್ರಭುತ್ವದ ನಾಯಕರ ಲಕ್ಷಣ ಅಲ್ಲ ಎಂದೂ ಟೀಕಿಸಿದ್ದಾರೆ.
ಇನ್ನು ಅಮೆರಿಕ ಅಧ್ಯಕ್ಷರೊಬ್ಬರು ಜೀವಂತವಿರುವಾಗಲೇ ನಾಣ್ಯದ ಮೇಲೆ ಭಾವಚಿತ್ರ ಹೊಂದುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅಮೆರಿಕದ 150ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ 1926ರಲ್ಲಿ ದೇಶದ 30ನೇ ಅಧ್ಯಕ್ಷರಾಗಿದ್ದ ಕಾಲ್ವಿನ್ ಕೂಲೆಡ್ಜ್ ಅವರ ಭಾವಚಿತ್ರವನ್ನೂ ನಾಣ್ಯದಲ್ಲಿ ಮುದ್ರಿಸಲಾಗಿತ್ತು.

