ಕೀವ್: ಪೂರ್ವ ಉಕ್ರೇನ್‍ನ ನಿಕೊಪೊಲ್ ನಗರದ ಮಾರುಕಟ್ಟೆಯ ಮೇಲೆ ಶನಿವಾರ ರಷ್ಯ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮಹಿಳೆಯರ ಸಹಿತ ಐವರು ಮೃತಪಟ್ಟಿದ್ದು, ಇತರ 19 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಗಾಯಾಳುಗಳಲ್ಲಿ 14 ವರ್ಷದ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಈಶಾನ್ಯದ ಖಾರ್ಕಿವ್ ನಗರದ ಮೇಲೆ ಶನಿವಾರ ಬೆಳಿಗ್ಗೆ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಉತ್ತರದ ಸುಮಿ ಪ್ರಾಂತದಲ್ಲಿ ಶುಕ್ರವಾರ ರಾತ್ರಿ ವಸತಿ ಪ್ರದೇಶಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ. ಹಲವು ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ಪೂರ್ವದ ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ 5 ತಿಂಗಳ ಮಗು ಮತ್ತು 6 ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ಪ್ರಾಂತೀಯ ಪೊಲೀಸರು ಹೇಳಿದ್ದಾರೆ. ಶುಕ್ರವಾರ ತಡರಾತ್ರಿಯಿಂದ ರಷ್ಯ 286 ಡ್ರೋನ್‍ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 260 ಡ್ರೋನ್‍ಗಳನ್ನು ನಿರ್ಬಂಧಿಸಿರುವುದಾಗಿ ಉಕ್ರೇನ್‍ನ ವಾಯುಪಡೆ ಹೇಳಿದೆ.
ಈ ಮಧ್ಯೆ, ಉಕ್ರೇನ್‍ನ ಗಡಿಗೆ ಸನಿಹದಲ್ಲಿರುವ ದಕ್ಷಿಣ ರೊಸ್ತೊವ್ ಪ್ರಾಂತದ ತಗನ್‍ರೊಗ್ ನಗರದ ಮೇಲೆ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದಾಗಿ ರಶ್ಯಾದ ಅಧಿಕಾರಿಗಳು ಹೇಳಿದ್ದಾರೆ.

