ಮುಂಬೈ: 90 ವರ್ಷದ ವಯೋವೃದ್ಧೆಯೊಬ್ಬರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಇನ್ನೂ 20 ವರ್ಷ ಕಾಯುವಂತೆ ಸೂಚಿಸುವ ಮೂಲಕ ಬಾಂಬೆ ಹೈಕೋರ್ಟ್, ಅತ್ಯಗತ್ಯವಲ್ಲದ ವ್ಯಾಜ್ಯಗಳಿಗೆ ನ್ಯಾಯಾಲಯಗಳ ಸಮಯ ವ್ಯರ್ಥವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
90 ವರ್ಷದ ತಾರಿಣಿಬೆನ್ ಹಾಗೂ 57 ವರ್ಷದ ಧವನಿ ದೇಸಾಯಿ ಅವರು ಇತರರ ವಿರುದ್ಧ ಹೂಡಿರುವ ಕಾನೂನು ವ್ಯಾಜ್ಯವು ಅಹಮಿಕೆಯ ಸಂಘರ್ಷವಾಗಿದೆ ಎಂದು ನ್ಯಾಯಮೂರ್ತಿ ಜಿತೇಂದ್ರ ಜೈನ್ ನೇತೃತ್ವದ ಏಕಸದಸ್ಯ ಪೀಠ ತಿಳಿಸಿದೆ.
ಈ ಪ್ರಕರಣವು ನ್ಯಾಯಾಂಗ ವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಜೈನ್ ಅವರು, ಪ್ರಕರಣವನ್ನು 2046ನೇ ಇಸವಿಯ ನಂತರವೇ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿದರು. ತಾರಿಣಿಬೆನ್ ಹಾಗೂ ಧವನಿ ದೇಸಾಯಿ ಅವರು ಕಲ್ಕಾಜಿ ಭನ್ಸಾಲಿ ಮತ್ತಿತರರ ವಿರುದ್ಧ ಮೊಕದ್ದಮೆ ಹೂಡಿದ್ದರು.
2025ರಲ್ಲಿ ಶ್ಯಾಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಘಟನೆಗಳಿಂದ ತಮಗೆ ಮಾನಸಿಕ ಕಿರುಕುಳ ಹಾಗೂ ಸಂಕಟ ಉಂಟಾಗಿದೆ ಎಂದು ಹೇಳಿ, 20 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅವರು ವಾದಿಸಿದ್ದರು.
ಬದುಕಿನ ಮುಸ್ಸಂಜೆಯಲ್ಲಿ ಅರ್ಜಿದಾರರು ನಡೆಸುತ್ತಿರುವ ಕಾನೂನು ಸಮರವು ಅಹಮಿಕೆಯ ಸಂಘರ್ಷವಾಗಿದ್ದು, ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತಿದೆ. ಇದರಿಂದ ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಈ ಪ್ರಕರಣವನ್ನು ಕ್ಷಮಾಯಾಚನೆಯ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯವು ಈ ಹಿಂದೆ ಸಲಹೆ ನೀಡಿತ್ತು. ಆದರೆ 90 ವರ್ಷದ ಅರ್ಜಿದಾರರು ಪಟ್ಟು ಸಡಿಲಿಸದೆ ಮೊಕದ್ದಮೆಯನ್ನು ಮುಂದುವರಿಸಿದ್ದರು.
ದೂರುದಾರರು ವಯೋವೃದ್ಧೆಯಾಗಿರುವುದೇ ಏಕೈಕ ಕಾರಣಕ್ಕಾಗಿ ಅರ್ಜಿಗೆ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ ಮುಂದಿನ 20 ವರ್ಷಗಳವರೆಗೆ ಪ್ರಕರಣವನ್ನು ವಿಚಾರಣೆ ನಡೆಸಬಾರದು ಎಂದು ಸೂಚಿಸಿ, 2046ನೇ ಇಸವಿಗೆ ಪಟ್ಟಿ ಮಾಡಲು ಆದೇಶಿಸಿದೆ.

