ನವದೆಹಲಿ: ಒಂದೊಳ್ಳೆ ಬದುಕು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ಓದು, ಉದ್ಯೋಗಕ್ಕೆಂದು ಅದೆಷ್ಟೋ ಮಂದಿ ಹುಟ್ಟೂರು, ಕುಟುಂಬ ತೊರೆದು ಕೊನೆಗೆ ದೇಶವನ್ನೂ ಬಿಟ್ಟು ವಿದೇಶಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ವಿದೇಶದಲ್ಲಿ ಬದುಕು ಸುಲಭವಲ್ಲ ಎನ್ನುವುದಕ್ಕೆ ಅನೇಕ ವಿದ್ಯಾರ್ಥಿಗಳ ಸಾವು, ಯುದ್ಧದಂತಹ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿವೆ.
ಈ ನಡುವೆ ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶವು, ಕಳೆದ ಐದು ವರ್ಷದಲ್ಲಿ ಪ್ರತಿ ದಿನ 20 ಕ್ಕೂ ಹೆಚ್ಚು ಭಾರತ ಮೂಲದ ಕಾರ್ಮಿಕರು ವಿದೇಶಿ ನೆಲದಲ್ಲಿ ಮೃತಪಡುತ್ತಿದ್ದು, ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲೇ ಹೆಚ್ಚು ಪ್ರಕರಣಗಳು ನಡೆದಿವೆ ಎನ್ನುವುದನ್ನು ಬಹಿರಂಗಪಡಿಸಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ರಾಜ್ಯಸಭೆಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2021-2025ರ ಅವಧಿಯಲ್ಲಿ ವಿದೇಶದಲ್ಲಿ ವಿವಿಧ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ 37,740ಕ್ಕೆ ಏರಿಕೆಯಾಗಿದೆ. ಸಾವಿಗೆ ನಿಖರ ಕಾರಣಗಳನ್ನು ಅವರು ಬಹಿರಂಗಪಡಿಸಿಲ್ಲ.
ಅದರ ಪ್ರಕಾರ, 2021ರಲ್ಲಿ ಅತಿ ಹೆಚ್ಚು, ಅಂದರೆ 8,234 ಭಾರತ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ. 2022ರಲ್ಲಿ ಸಾವಿನ ಪ್ರಮಾಣ ತುಸು ಇಳಿಕೆಯಾಗಿ 6,614ಕ್ಕೆ ತಲುಪಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಏರಿಕೆಯಾಗಿದ್ದು, 2023ರಲ್ಲಿ 7,291 ಮಂದಿ, 2024ರಲ್ಲಿ 7,747 ಹಾಗೂ 2025ರಲ್ಲಿ 7,854 ಸಾವಿನ ಪ್ರಕರಣಗಳು ವರದಿಯಾಗಿವೆ.
ಈ ಸಾವಿನ ಸಂಖ್ಯೆಯಲ್ಲಿ ಶೇ 86ರಷ್ಟು ಸಂಭವಿಸಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ಎನ್ನುವುದು ಆತಂಕಕಾರಿ ವಿಚಾರ. ಕಳೆದ 5 ವರ್ಷಗಳಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) 12,380 ಮತ್ತು ಸೌದಿ ಅರೇಬಿಯಾದಲ್ಲಿ 11,757 ಪ್ರಕರಣಗಳು ವರದಿಯಾಗಿವೆ. ಇದೇ ಪ್ರಕಾರ ಕುವೈತ್‌ನಲ್ಲಿ 3,890, ಓಮಾನ್‌ನಲ್ಲಿ 2,821, ಮಲೇಷ್ಯಾದಲ್ಲಿ 1,915 ಮತ್ತು ಕತಾರ್‌ನಲ್ಲಿ 1,760 ಸಾವಿನ ಪ್ರಕರಗಳು ವರದಿಯಾಗಿವೆ.
ಈ ಅವಧಿಯಲ್ಲಿ ಭಾರತೀಯ ನಾಗರಿಕರಿಂದ ದೌರ್ಜನ್ಯ, ಶೋಷಣೆ ಮತ್ತು ವೃತ್ತಿ ಸ್ಥಳದಲ್ಲಿನ ಸಮಸ್ಯೆಯ ಬಗ್ಗೆ ವಿದೇಶದಲ್ಲಿರುವ ಭಾರತದ ಕಚೇರಿಗೆ 80,985 ದೂರುಗಳು ಬಂದಿವೆ. ಯುಎಇಯಿಂದಲೇ ಹೆಚ್ಚು ದೂರುಗಳು ಬಂದಿವೆ. ಕುವೈತ್‌ನಲ್ಲಿ 15,234, ಓಮಾನ್‌ನಲ್ಲಿ 13,295 ಮತ್ತು ಸೌದಿ ಅರೇಬಿಯಾದಲ್ಲಿ 12,988 ದೂರುಗಳು ದಾಖಲಾಗಿವೆ.
ಸಚಿವಾಲಯ ಉತ್ತರಿಸಿದ ಪ್ರಕಾರ, ಭಾರತೀಯ ಮೂಲದ ಕಾರ್ಮಿಕರು ಎದುರಿಸಿದ ಸಾಮಾನ್ಯ ಸಮಸ್ಯೆಗಳೆಂದರೆ ವಿಳಂಬ ಸಂಬಳ ಅಥವಾ ಸಂಬಳ ಸಿಗದೇ ಇರುವುದು, ಪಾಸ್‌ಪೋರ್ಟ್ ವಾಪಸ್ ಸಿಗದೇ ಇರುವುದು, ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿಸಿಕೊಳ್ಳುವುದು ಸೇರಿದಂತೆ ಸರಿಯಾಗಿ ಚಿಕಿತ್ಸೆ ಸಿಗದೇ ಇರುವುದು, ಗುತ್ತಿಗೆ ಅವಧಿ ಮುಗಿದ ಬಳಿಕ ಭಾರತಕ್ಕೆ ವಾಪಸ್ಸಾಗಲು ವೀಸಾ ನೀಡದೇ ಇರುವ ಪ್ರಕರಣಗಳೂ ಸಚಿವಾಲಯದ ಗಮನಕ್ಕೆ ಬಂದಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಮೊದಲ ಆದ್ಯತೆಯಾಗಿದೆ. ಭಾರತೀಯರು ತೊಂದರೆಗೆ ಸಿಲುಕಿದ್ದಾರೆ ಎನ್ನುವ ಮಾಹಿತಿ ತಿಳಿದರೆ ತಕ್ಷಣ ಸ್ಥಳೀಯ ವಿದೇಶಾಂಗ ಸಚಿವಾಲಯದೊಂದಿಗೆ ಸಂವಹನ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

