ಕಾಸರಗೋಡು: ಸೂರ್ಯಾಘಾತಕ್ಕೆ ಕಾಸರಗೋಡು ಜಿಲ್ಲೆಯ ಇಬ್ಬರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯ ಉಂಟಾಗಿದೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾಸರಗೋಡಿನ ರಾಜಪುರಂ ಕೋಲಿಚ್ಚಾಲ್‍ನ ಮರಿಯಂ ವೇಲಿಲ್ ಟಿಟ್ಟೊ (48), ತೃಕರಿಪುರ ವಡಕ್ಕೆ ಕೊವ್ವಲ್‍ನ ಶೇಖ್ ಅಹಮ್ಮದ್ ಜವಾಸ್ (19) ಸೇರಿದಂತೆ ಸೂರ್ಯಾಘಾತಕ್ಕೊಳಗಾದ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಕಾಂಗ್ರೆಸ್ ನೇತಾರರಾಗಿರುವ ಮರಿಯಂ ವೇಲಿಲ್ ಟಿಟ್ಟೊ ಅವರು ತಮ್ಮ ಮನೆಯ ತೆಂಗಿನ ತೋಟದಲ್ಲಿ ಸೂರ್ಯಾಘಾತಕ್ಕೊಳಗಾಗಿದ್ದರೆ, ಶೇಖ್ ಅಹಮ್ಮದ್ ಜವಾಸ್ ಪೇಂಟಿಂಗ್ ಕಾರ್ಮಿಕರಾಗಿದ್ದು, ಪೈಂಟಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅವರಿಗೆ ಸೂರ್ಯಾಘಾತ ಸಂಭವಿಸಿದೆ.
ಸೂರ್ಯಾಘಾತದಿಂದ ರಾಜ್ಯದಲ್ಲಿ ಇದುವರೆಗೆ ಐದು ಮಂದಿ ಸಾವಿಗೀಡಾಗಿದ್ದಾರೆ. ಬಿಸಿಲ ಬೇಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ತಾತ್ಕಾಲಿಕ ತಡೆಹೇರಿದ್ದು, ಕ್ರೀಡಾ ಕಾರ್ಯಕ್ರಮಗಳಿಗೂ ಇದನ್ನು ಸಮಾನವಾಗಿ ಅನ್ವಯಗೊಳಿಸಲಾಗಿದೆ.

