ಪುಣೆ: ನೀರು ಶುದ್ಧೀಕರಣ ಘಟಕವೊಂದರಿಂದ ವಿಷಕಾರಿ ಕ್ಲೋರಿನ್ ಅನಿಲ ಸೋರಿಕೆಯಾಗಿ 24 ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಕೊಂಡ್ವಾ ನಗರದ ಗಂಗಾಧಾಮ ಪ್ರದೇಶದ ಬಳಕೆಯಲ್ಲಿಲ್ಲದ ನೀರು ಶುದ್ಧೀಕರಣ ಘಟಕದಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ನಡೆದಿದೆ.
ಕ್ಲೋರಿನ್ ಅನಿಲ ಸೋರಿಕೆಯಿಂದ ಘಟಕದ ಬಳಿಯಿದ್ದ ಅಪಾರ್ಟ್‌ಮೆಂಟ್ ಹಾಗೂ ಕೆಲ ಮನೆಗಳ 22 ಜನ ಅಸ್ವಸ್ಥರಾಗಿದ್ದರು. ಬಳಿಕ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥಗೊಂಡಿದ್ದರು.
ನೀರು ಶುದ್ಧೀಕರಣ ಘಟಕವು ಕಳೆದ ಕೆಲವು ದಿನಗಳಿಂದ ಬಳಕೆಯಲ್ಲಿಲ್ಲ. ದುರಸ್ಥಿ ಕಾರ್ಯವನ್ನೂ ಕೈಗೊಳ್ಳಲಾಗಿತ್ತು. ಆದರೆ, ಕ್ಲೋರಿನ್ ತುಂಬಿದ್ದ ಟ್ಯಾಂಕ್ ಅನ್ನು ಸರಿಯಾಗಿ ದುರಸ್ಥಿ ಮಾಡದೇ ಹಾಗೇ ಬಿಟ್ಟಿದ್ದರು. ಇದರಿಂದ ಅನಿಲ ಸೋರಿಕೆಯಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಅಸ್ವಸ್ಥಗೊಂಡವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಲೋರಿನ್ ಅನಿಲವು ಒಂದು ವಿಷಕಾರಿ ಅನಿಲವಾಗಿದೆ. ಇದು ಹಳದಿ-ಹಸಿರು ಮಿಶ್ರಿತ ಬಣ್ಣದಲ್ಲಿದ್ದು ಗಾಳಿಗಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿರುತ್ತದೆ. ಹಾಗಾಗಿ ಸೋರಿಕೆಯಾದಾಗ ತಗ್ಗು ಪ್ರದೇಶಗಳಲ್ಲಿ ನೆಲೆಗೊಳ್ಳುತ್ತದೆ. ಈ ಅನಿಲವನ್ನು ಜಲ ಶುದ್ಧೀಕರಣ, ಪಿವಿಸಿ ಪೈಪ್‌ನಂತಹ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

