ನವದೆಹಲಿ: ಗರ್ಭಿಣಿಯಾಗಿರುವ 15 ವರ್ಷದ ಬಾಲಕಿಯ 30 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆದುಹಾಕಲು ಅವಕಾಶ ಕಲ್ಪಿಸಿರುವ ಹಿಂದಿನ ಆದೇಶವನ್ನು ರದ್ದು ಮಾಡುವಂತೆ ಕೋರಿ ಏಮ್ಸ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅತ್ಯಾಚಾರ ಸಂತ್ರಸ್ತರು ಗರ್ಭ ಧರಿಸಿದ್ದರೆ, 20 ವಾರಗಳ ನಂತರವೂ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಾನೂನಾತ್ಮಕ ತಿದ್ದುಪಡಿ ತರುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ಅತ್ಯಾಚಾರ ಸಂತ್ರಸ್ತರು ಗರ್ಭ ಧರಿಸಿದ ಪಕ್ಷದಲ್ಲಿ, ಗರ್ಭಪಾತಕ್ಕೆ ಸಮಯದ ಮಿತಿ ಇರಬಾರದು ಎಂದಿದೆ. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆಯು ಜೀವನಪರ್ಯಂತ ನೋವು ಮತ್ತು ಆಘಾತ ಅನುಭವಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದೆ.
ಗರ್ಭಿಣಿಗೆ ಶಾಶ್ವತ ಆರೋಗ್ಯ ಸಮಸ್ಯೆಗಳು ಎದುರಾಗದಿದ್ದರೆ, ಗರ್ಭಪಾತ ನಡೆಸಬಹುದು ಎಂದು ಹೇಳಿರುವ ಪೀಠ, 15 ವರ್ಷದ ಬಾಲಕಿಯ ಪ್ರಕರಣದಲ್ಲಿ ಸಂತ್ರಸ್ತೆಯ ಪೋಷಕರಿಗೆ ಸಲಹೆಗಳನ್ನು ನೀಡುವಂತೆ ಏಮ್ಸ್‌ಗೆ ಸೂಚಿಸಿದೆ. ಹಾಗೆಯೇ, ಈ ವಿಚಾರವಾಗಿ ಸಂಬಂಧಪಟ್ಟವರೇ ನಿರ್ಧಾರ ಕೈಗೊಳ್ಳಬೇಕು ಎಂದೂ ಸ್ಪಷ್ಟಪಡಿಸಿದೆ.
'ದತ್ತು ಪಡೆಯುವುದಕ್ಕಾಗಿ ದೇಶದಲ್ಲಿ ಸಾಕಷ್ಟು ಮಕ್ಕಳಿವೆ. ಬೀದಿಗಳಲ್ಲಿ ಬದುಕುತ್ತಿರುವ ಸಾಕಷ್ಟು ಅನಾಥ ಮಕ್ಕಳಿವೆ. ಅವರ ಮೇಲೆಯೇ ಮಾಫಿಯಾಗಳು ನಡೆಯುತ್ತಿವೆ. ಅದರ ಬಗ್ಗೆಯೂ ನೋಡಬೇಕಿದೆ. ಇದು (15 ವರ್ಷದ ಬಾಲಕಿಯ ಪ್ರಕರಣ) ಅನಗತ್ಯ ಗರ್ಭಧಾರಣೆಯ ವಿಚಾರವಾಗಿದೆ' ಎಂದು ತಿಳಿಸಿದೆ.
'ಅನಗತ್ಯ ಗರ್ಭಧಾರಣೆಯನ್ನು ಮಗುವಿನ ಮೇಲೆ ಹೇರಲು ಸಾಧ್ಯವಿಲ್ಲ. ಓದುತ್ತಿರುವ ಮಗುವನ್ನು ತಾಯಿಯನ್ನಾಗಿಸಲಾಗದು. ಬಾಲಕಿ ಅನುಭವಿಸಿದ ನೋವು, ಅವಮಾನವನ್ನು ಊಹಿಸಿ' ಎಂದು ಪೀಠ ಹೇಳಿದೆ.
ಏಮ್ಸ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, 'ಈಗ ಗರ್ಭಪಾತ ಮಾಡಿಸಿದರೆ, ಬಾಲಕಿಗೆ ಜೀವನಪರ್ಯಂತ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮುಂದೆ ಮಕ್ಕಳಾಗದಿರುವ ಸಾಧ್ಯತೆ ಇದೆ. ಹುಟ್ಟುವ ಮಗುವನ್ನು ದತ್ತು ನೀಡಬಹುದು. ಭ್ರೂಣಕ್ಕೆ 30 ವಾರ ಕಳೆದಿರುವುದರಿಂದ ಈಗ ಗರ್ಭಪಾತ ಸಾಧ್ಯವಿಲ್ಲ' ಎಂಬುದಾಗಿ ವಾದಿಸಿದ್ದರು.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಬಾಲಕಿಯ 30 ವಾರಗಳ ಭ್ರೂಣವನ್ನು ವೈದ್ಯಕೀಯವಾಗಿ ತೆಗೆಸಲು ಏಪ್ರಿಲ್ 24ರಂದು ಅನುಮತಿ ನೀಡಿತ್ತು.

