ನವದೆಹಲಿ: ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದಾಗ ಮಧ್ಯಾಹ್ನ ಸುಮಾರು 12:56ಕ್ಕೆ ಮೊದಲ ಬಾರಿಗೆ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ.
ತಕ್ಷಣವೇ ವರ್ಚುವಲ್ ಕಲಾಪವನ್ನು ಸ್ಥಗಿತಗೊಳಿಸಲಾಯಿತು. ಕೆಲವು ನಿಮಿಷಗಳ ನಂತರ ಕಲಾಪವನ್ನು ಪುನರಾರಂಭಿಸಿದಾಗ, 'ಶ್ಜಿತ್ ಸಿಂಗ್' ಎಂಬ ಹೆಸರಿನಲ್ಲಿ ಲಾಗಿನ್ ಆಗಿದ್ದ ವ್ಯಕ್ತಿಯು ಮತ್ತೆ ಅಶ್ಲೀಲ ವಿಡಿಯೊವನ್ನು ಪ್ರಸಾರ ಮಾಡಿದ್ದಾನೆ. ಕನಿಷ್ಠ ಎರಡು ಸ್ಕ್ರೀನ್‌ಗಳಲ್ಲಿ ಅಶ್ಲೀಲ ದೃಶ್ಯಗಳು ಪ್ರದರ್ಶನಗೊಂಡಿವೆ.
ಆ ಅಪರಿಚಿತ ವ್ಯಕ್ತಿಯು 'ನೀವು ಹ್ಯಾಕ್ ಆಗಿದ್ದೀರಿ' ಎಂಬ ಸಂದೇಶವನ್ನೂ ಕಳುಹಿಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಕಲಾಪಕ್ಕೆ ಅಡ್ಡಿಪಡಿಸುವ ಮೂರನೇ ಪ್ರಯತ್ನದಲ್ಲಿ ಆತ ಅಶ್ಲೀಲ ವಿಡಿಯೊ ಬದಲು ಹಾಡೊಂದನ್ನು ಪ್ಲೇ ಮಾಡಿದ್ದಾನೆ. ಇದರಿಂದಾಗಿ ಮುಖ್ಯ ನ್ಯಾಯಮೂರ್ತಿಗಳು ಅನಿವಾರ್ಯವಾಗಿ ವರ್ಚುವಲ್ ವಿಚಾರಣೆಯನ್ನು ಸ್ಥಗಿತಗೊಳಿಸಬೇಕಾಯಿತು.
ವರ್ಚುವಲ್ ವಿಚಾರಣೆ ಸಮಯದಲ್ಲಿ ಅಶ್ಲೀಲ ವಿಡಿಯೊ ಪ್ರಸಾರವಾದ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿರುವುದಾಗಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ. ನ್ಯಾಯಾಲಯದ ಕಲಾಪಗಳನ್ನು ರೆಕಾರ್ಡ್ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಇಂತಹ ಘಟನೆಗಳನ್ನು ರೆಕಾರ್ಡ್ ಮಾಡುವ ಅಥವಾ ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕೇವಲ ಈ ನ್ಯಾಯಾಲಯದಲ್ಲಿ ಮಾತ್ರವಲ್ಲದೆ ಇತರ ಅನೇಕ ನ್ಯಾಯಾಲಯಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರು ಪೀಠಕ್ಕೆ ತಿಳಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಬಗ್ಗೆ ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ ಘಟಕಕ್ಕೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

