ನವದೆಹಲಿ: ಬಿಸಿಗಾಳಿ ಹೆಚ್ಚಳದಿಂದ ದೇಶದಲ್ಲಿ ಹವಾನಿಯಂತ್ರಕಗಳು ಹಾಗೂ ಕೂಲರ್‌ಗಳ ಬಳಕೆ ಹೆಚ್ಚಿದೆ. ಇದರಿಂದ ಏಪ್ರಿಲ್ 24ರಂದು ದೇಶದಲ್ಲಿ ವಿದ್ಯುತ್ ಬೇಡಿಕೆ 252.07 ಗಿಗಾವಾಟ್‌ಗೆ ತಲುಪಿದೆ. ಇದು ಈವರೆಗಿನ ಗರಿಷ್ಠ ಮಟ್ಟದ ವಿದ್ಯುತ್ ಬೇಡಿಕೆಯಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯವು ತಿಳಿಸಿದೆ.
2024ರ ಮೇ ತಿಂಗಳಿನಲ್ಲಿ ವಿದ್ಯುತ್ ಬೇಡಿಕೆ 250 ಗಿಗಾವಾಟ್‌ನಷ್ಟಿತ್ತು. ಅದು ಆವರೆಗಿನ ಗರಿಷ್ಠ ಮಟ್ಟದ ವಿದ್ಯುತ್ ಬೇಡಿಕೆ ಆಗಿತ್ತು. ಈ ವರ್ಷದ ಏಪ್ರಿಲ್ 23ರಂದು ವಿದ್ಯುತ್ ಬೇಡಿಕೆ 240.12 ಗಿಗಾವಾಟ್‌ಗೆ ತಲುಪಿತ್ತು. ಮರುದಿನವೇ (ಏಪ್ರಿಲ್ 24ರಂದು) 252 ಗಿಗಾವಾಟ್ ದಾಟಿದೆ.
ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯು ದಿನವೊಂದಕ್ಕೆ 270 ಗಿಗಾವಾಟ್‌ಗೆ ತಲುಪಲಿದೆ ಎಂದು ವಿದ್ಯುತ್ ಸಚಿವಾಲಯವು ಈಗಾಗಲೇ ಅಂದಾಜಿಸಿದೆ. ಕಳೆದ ವರ್ಷದ ಬೇಸಿಗೆಯಲ್ಲಿ 242.77 ಗಿಗಾವಾಟ್ ವಿದ್ಯುತ್‌ಗೆ ಬೇಡಿಕೆ ಉಂಟಾಗಿತ್ತು.
ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

