ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆ ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿ ನಾಗರಿಕನ ಜವಾಬ್ದಾರಿಯಾಗಿದ್ದು ಈ ಅಭಿಯಾನದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 2027ರ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಜನಗಣತಿ ಸಮಯದಲ್ಲಿ ಜನರು ನೀಡುವ ಎಲ್ಲಾ ಮಾಹಿತಿಗಳು ಸಂಪೂರ್ಣವಾಗಿ ಸುರಕ್ಷಿತ ಮತ್ತು ಗೌಪ್ಯವಾಗಿರುತ್ತವೆ. ಬಲಿಷ್ಠ ಡಿಜಿಟಲ್ ಭದ್ರತೆಯ ಮೂಲಕ ಈ ಡೇಟಾವನ್ನು ರಕ್ಷಿಸಲಾಗುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಭಾರತದ ಜನಗಣತಿಯು ವಿಶ್ವದ ಅತಿದೊಡ್ಡ ಪ್ರಕ್ರಿಯೆಯಾಗಿದ್ದು ಈ ಸಲದ ಜನಗಣತಿಯನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ. ಗಣತಿದಾರರು ಮೊಬೈಲ್ ಆಪ್ ಮೂಲಕ ನೇರವಾಗಿ ಮಾಹಿತಿ ದಾಖಲಿಸಲಿದ್ದಾರೆ.
ಈ ಬಾರಿ ಸಾರ್ವಜನಿಕರಿಗೆ ಒಂದು ವಿಶೇಷ ಅವಕಾಶ ನೀಡಲಾಗಿದ್ದು ನಾಗರಿಕರು ಸ್ವತಹ ಆನ್‌ಲೈನ್ ಮೂಲಕ ಮಾಹಿತಿ ನೀಡಬಹುದು ಎಂದು ಮೋದಿ ಹೇಳಿದರು.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಸ್ವಯಂ-ಗಣತಿ ಪ್ರಕ್ರಿಯೆ ಮುಗಿದಿದ್ದು, ಅಧಿಕಾರಿಗಳು ಮನೆಗಳ ಪಟ್ಟಿ ಮಾಡುವ ಕೆಲಸವನ್ನು ಪ್ರಾರಂಭಿಸಿದ್ದಾರೆ. ಈವರೆಗೆ ಸುಮಾರು 1.2 ಕೋಟಿ ಕುಟುಂಬಗಳು ಮಾಹಿತಿ ನೀಡಿವೆ ಎಂದು ಹೇಳಿದರು.

