ಜೈಪುರ (PTI): 'ನ್ಯಾಯಾಂಗ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಸಾರ್ವಜನಿಕ ನಂಬಿಕೆ ಹೊಂದಿದ್ದು, ಇದನ್ನು ಬಲಪಡಿಸುವುದು ಅವು ಗಳ ಜವಾಬ್ದಾರಿಯಾಗಿದೆ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಶನಿವಾರ ಇಲ್ಲಿ ಹೇಳಿದರು.
ನಿವೃತ್ತ ನ್ಯಾಯಾಧೀಶರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, 'ಸವಾಲಿನ ಸಮಯದಲ್ಲಿ ನಿವೃತ್ತರು ವ್ಯವಸ್ಥೆಗೆ ಮಾರ್ಗದರ್ಶನ ನೀಡುವ ಅರಿವಿನ ಜಲಾಶಯವಿದ್ದಂತೆ' ಎಂದು ಬಣ್ಣಿಸಿದರು.
'ಕಷ್ಟದ ಸಂದರ್ಭದಲ್ಲಿ ಯಾವುದು ಸರಿ- ತಪ್ಪು ಎಂಬುದರ ಕುರಿತಂತೆ ಮಾರ್ಗದರ್ಶನಕ್ಕಾಗಿ ನಾವು ಈ ಅನುಭವಿ ನಿವೃತ್ತ ನ್ಯಾಯಮೂರ್ತಿಗಳತ್ತ ನೋಡುತ್ತೇವೆ' ಎಂದರು.
'ನಿವೃತ್ತ ನ್ಯಾಯಾಧೀಶರು ಮಧ್ಯವರ್ತಿಗಳು ಹಾಗೂ ಮಧ್ಯಸ್ಥಗಾರರಾಗಿವಿಶೇಷವಾಗಿ ವಾಣಿಜ್ಯ, ಕೌಟುಂಬಿಕ ವಿಷಯಗಳಲ್ಲಿ ಸಲಹೆಗಾರರ ಪಾತ್ರ ವನ್ನು ನಿರ್ವಹಿಸುವ ಮೂಲಕ ನಾಗರಿಕರಿಗೆ ಹಕ್ಕುಗಳನ್ನು ತಿಳಿಸಬೇಕು' ಎಂದರು.
'ನಿವೃತ್ತ ನ್ಯಾಯಮೂರ್ತಿಗಳ ಅನುಭವವನ್ನು ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನದಲ್ಲಿ ಬಳಸಿಕೊಳ್ಳಲು ರಚನಾತ್ಮಕ ರಾಷ್ಟ್ರೀಯ ಚೌಕಟ್ಟು ರಚಿಸುವಂತೆಯೂ' ಸಿಜೆಐ ಸಲಹೆ ನೀಡಿದರು.

