ನವದೆಹಲಿ: ಭಾರತೀಯ ಛಾಯಾಚಿತ್ರ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾಗಿದ್ದ ಹಿರಿಯ ಛಾಯಾಗ್ರಾಹಕ ರಘು ರೈ ಅವರು ಭಾನುವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
1942ರ ಡಿಸೆಂಬರ್ 18ರಂದು ಝಾಂಗ್‌ನಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ ರಘು ರೈ, 1960ರಲ್ಲಿ ವೃತ್ತಿಜೀವನ ಆರಂಭಿಸಿದರು. ದೆಹಲಿ ಮೂಲದ 'ದಿ ಸ್ಟೇಟ್ಸ್‌ಮನ್' ಪತ್ರಿಕೆಯಲ್ಲಿ ಸ್ಟಾಫ್ ಫೋಟೋಗ್ರಾಫರ್ ಕೆಲಸಕ್ಕೆ ಸೇರಿದರು. ನಂತರ ಇಂಡಿಯಾ ಟುಡೇ ಸೇರಿದಂತೆ ಹಲವು ಪತ್ರಕೆಗಳಲ್ಲಿ ಕೆಲಸ ಮಾಡಿದರು.
ಭೋಪಾಲ್ ಅನಿಲ ದುರಂತದ ನಂತರ ಅವರು ಸೆರೆಹಿಡಿದ ಹೃದಯವಿದ್ರಾವಕ ಚಿತ್ರಗಳು ಇಡೀ ಜಗತ್ತನ್ನೇ ಅಲುಗಾಡಿಸಿದ್ದವು. ರಘು ರೈ ಅವರ ಕ್ಯಾಮೆರಾ ಕಣ್ಣು ಆಧುನಿಕ ಭಾರತದ ದೃಶ್ಯ ದಾಖಲೆಯಾಗಿತ್ತು. ಅವರು ಸೆರೆಹಿಡಿದ ಚಿತ್ರಗಳು ಕೇವಲ ಭಾವಚಿತ್ರಗಳಲ್ಲ, ಅವು ಇತಿಹಾಸದ ಸಾಕ್ಷಿ ಎಂದು ಅವರ ಒಡನಾಡಿಗಳು ಹೇಳುತ್ತಾರೆ.
ರಘು ರೈ ಅವರ ನಿಧನಕ್ಕೆ ದೇಶದ ಗಣ್ಯರು ಹಾಗೂ ಛಾಯಾಗ್ರಹಣ ಲೋಕದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

