ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ವಿದೇಶಿ ಗಣ್ಯರ ಆಗಮನಕ್ಕೆ ಪಾಕಿಸ್ತಾನದಲ್ಲಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ಎಂದು 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಸಂಘರ್ಷವನ್ನು ಕೊನೆಗೊಳಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದ ಏ. 11 ಮತ್ತು ಏ.12ರಂದು ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್‌ದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಶಾಂತಿ ಒಪ್ಪಂದ ಬರುವುದಕ್ಕೆ ಉಭಯ ದೇಶಗಳು ನಾಯಕರು ವಿಫಲವಾಗಿದ್ದರು.
ಯುದ್ಧ ಕೊನೆಗೊಳಿಸಲು ಪಣತೊಟ್ಟಿರುವ ಪಾಕಿಸ್ತಾನವು, ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದೆ. ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರು ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಗೆ ಭೇಟಿ ನೀಡಿದ್ದರೆ, ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್ ಅವರು ಇರಾನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು.
ಹೇಗಿದೆ ಭದ್ರತಾ ವ್ಯವಸ್ಥೆ?
ಇಸ್ಲಾಮಾಬಾದ್‌ಗೆ ಹೊಂದಿಕೊಂಡಿರುವ ರಾವಲ್ಪಿಂಡಿ ನಗರದಾದ್ಯಂತ 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು 600ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ. ಸಂಭವನೀಯ ಮಾತುಕತೆ ಹಿನ್ನೆಲೆಯಲ್ಲಿ ರಾಜಧಾನಿದಲ್ಲಿಯೂ ಕಠಿಣ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.
ಭಾನುವಾರ ಮಧ್ಯರಾತ್ರಿಯಿಂದ ನೂರ್ ಖಾನ್ ವಾಯುನೆಲೆ ಮತ್ತು ಇಸ್ಲಾಮಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಲವಾರು ಸೂಕ್ಷ್ಮ ಪ್ರದೇಶಗಳನ್ನು ಬಂದ್ ಮಾಡುವುದಾಗಿ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ಇರಾನ್ ಜೊತೆಗೆ ಶಾಂತಿ ಒಪ್ಪಂದ ಅಂತಿಮಗೊಂಡರೆ, ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಬರುವುದದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದ್ದರಿಂದ ಕಠಿಣ ಭದ್ರತಾ ಕ್ರಮಕ್ಕೆ ಪಾಕಿಸ್ತಾನ ಮುಂದಾಗಿದೆ.
ಡ್ರೋನ್ ಹಾರಾಟಕ್ಕೆ ಬ್ರೇಕ್:
ರಾವಲ್ಪಿಂಡಿಯಲ್ಲಿ ಡ್ರೋನ್ ಹಾರಾಟ, ಪಾರಿವಾಳ ಹಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿದೇಶಿ ಗಣ್ಯರನ್ನು ಹೊತ್ತ ವಿಮಾನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾವಲ್ಪಿಂಡಿಯಲ್ಲಿ, ವಿಶೇಷವಾಗಿ ನೂರ್ ಖಾನ್ ವಾಯುನೆಲೆ ಮತ್ತು ಇಸ್ಲಾಮಾಬಾದ್ ವಿಮಾನ ನಿಲ್ದಾಣದ ಸಮೀಪದಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಹತ್ತಿರದ ಕಟ್ಟಡಗಳ ಮೇಲೆಯೂ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಹೋಟೆಲ್, ಅಂಗಡಿ ಮುಚ್ಚಲು ಆದೇಶ:
ನ್ಯೂ ಟೌನ್, ಸಾದಿಕಾಬಾದ್ ಮತ್ತು ಚಕ್ಲಾಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿನ ರೆಸ್ಟೋರೆಂಟ್‌ಗಳನ್ನು ಭಾನುವಾರ ಮಧ್ಯರಾತ್ರಿಯಿಂದ ಮುಂದಿನ ಆದೇಶದವರೆಗೆ ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ. ಇದರ ಜೊತೆಗೆ ಪಾರ್ಕ್‌ಗಳು, ಬ್ಯೂಟಿ ಪಾರ್ಲರ್‌ಗಳು, ಮಾರುಕಟ್ಟೆಗಳು, ಸ್ನೂಕರ್ ಕ್ಲಬ್‌ಗಳು, ಫಿಟ್‌ನೆಸ್ ಸೆಂಟರ್‌ಗಳು, ಪಾನ್ ಶಾಪ್‌ಗಳು, ಕಿಯೋಸ್ಕ್‌ಗಳು, ಕ್ಷೌರದ ಅಂಗಡಿಗಳು, ಬ್ಯಾಂಕ್ ಮತ್ತು ಬೇಕರಿಗಳನ್ನೂ ಮುಚ್ಚಲು ಆದೇಶಿಸಲಾಗಿದೆ.
ರಾವಲ್ಪಿಂಡಿಯಲ್ಲಿರುವ ಎಲ್ಲಾ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳನ್ನು ಬಂದ್ ಮಾಡಲು ತಿಳಿಸಲಾಗಿದೆ. ಆದರೆ, ಈ ಪ್ರದೇಶಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಟೇರೆಸ್, ಬಾಲ್ಕನಿಯಲ್ಲಿ ತಿರುಗುವಂತಿಲ್ಲ:
ಇಸ್ಲಾಮಾಬಾದ್‌ನ ಸೂಕ್ಷ್ಮ ಪ್ರದೇಶಗಳಲ್ಲಿ ಹೈ-ಅಲರ್ಟ್ ಭದ್ರತೆ ಕೈಗೊಳ್ಳಲಾಗಿದೆ. ಈ ಮಾರ್ಗಗಳಲ್ಲಿ ನೆಲೆಗೊಂಡಿರುವ ಕಟ್ಟಡಗಳ ಮಾಲೀಕರಿಂದ ಭದ್ರತಾ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆಯನ್ನು ಆಡಳಿತವು ಪ್ರಾರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೂಕ್ಷ್ಮ ಮಾರ್ಗಗಳಲ್ಲಿ ನೆಲೆಸಿರುವ ಮನೆಗಳು, ಅಂಗಡಿಗಳು ಮತ್ತು ಹೋಟೆಲ್‌ಗಳ ಮಾಲೀಕರಿಗೆ ನಿರ್ದಿಷ್ಟ ಭದ್ರತಾ ಸೂಚನೆಗಳನ್ನು ನೀಡಲಾಗಿದೆ. ಈ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅತಿಥಿಗಳ ಸಂಪೂರ್ಣ ವಿವರಗಳನ್ನು ಪ್ರತಿದಿನ ಹತ್ತಿರದ ಪೊಲೀಸ್ ಠಾಣೆಗೆ ನೀಡುವಂತೆ ಹೋಟೆಲ್, ಗೆಸ್ಟ್‌ಹೌಸ್‌ಗಳಿಗೆ ಸೂಚಿಸಲಾಗಿದೆ. ಟೇರೆಸ್, ಬಾಲ್ಕನಿಯಲ್ಲಿ ಓಡಾಡದಂತೆ ಸೂಚಿಸಲಾಗಿದೆ. ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಕಟ್ಟಡದ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವು ಏ. 22 ರಂದು ಮುಕ್ತಾಯಗೊಳ್ಳಲಿದೆ.

